ಚಾಮರಾಜನಗರ: ಸಿಎಂ ಯಡಿಯೂರಪ್ಪ ಮೂಢನಂಬಿಕೆಗೆ ಕಟ್ಟುಬಿದ್ದಿದ್ದಾರಾ? ಹೌದು ಹೀಗೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಕಾರಣ ಅಧಿಕಾರ ವಹಿಸಿಕೊಂಡು 16 ತಿಂಗಳು ಕಳೆದರು ಸಿಎಂ ಚಾಮರಾಜನಗರದತ್ತ ತಲೆ ಹಾಕಿಲ್ಲ. ಆದರೆ ಇದೇ ತಿಂಗಳು 25ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗಾಗಿ ಜಿಲ್ಲೆಯ ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿರುವ ಯಡಿಯೂರಪ್ಪ ಚಾಮರಾಜನಗರಕ್ಕೆ ಭೇಟಿ ನೀಡುತ್ತಿಲ್ಲ ಎಂಬುದು ಚರ್ಚೆಗೆ ಗ್ರಾಸವಾಗಿದೆ.
2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಸುಮಾರು ಮೂರು ವರ್ಷ ಕಾಲ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಒಮ್ಮೆಯೂ ಚಾಮರಾಜನಗರಕ್ಕೆ ಭೇಟಿ ನೀಡಿರಲಿಲ್ಲ. ಇದೀಗ ಅದೇ ಪರಿಪಾಠ ಮುಂದುವರಿಸಿದ್ದು, ಚಾಮರಾಜನಗರ ಪಟ್ಟಣಕ್ಕೆ ಬಾರದೆ ಇದೇ ತಿಂಗಳು 25ರಂದು ಜಿಲ್ಲೆಯ ಮಹದೇಶ್ವರ ಬೆಟ್ಟಕ್ಕೆ ಬಂದು ಹೋಗುತ್ತಿದ್ದಾರೆ. ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತೆ ಎಂಬ ಮೂಢನಂಬಿಕೆಗೆ ಯಡಿಯೂರಪ್ಪ ಜೋತುಬಿದ್ದಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.