ಬೆಳಗಾವಿ : ಕುಲವಳ್ಳಿ ಸೇರಿ ಒಂಬತ್ತು ಗ್ರಾಮಗಳ ರೈತರು ನೀಡಿದ ಅರ್ಜಿಗಳ ಬಗ್ಗೆ ಕ್ರಮ ಕೈಗೊಳ್ಳದ ನಿರ್ಣಯದಿಂದ ಬೇಸತ್ತ ರೈತರು, ತಹಶೀಲ್ದಾರ್ ರವೀಂದ್ರ ಹಾದಿಮನಿ ಅವರಿಗೆ ಶುಕ್ರವಾರ ನೋಟಿಸ್ ನೀಡಿದ್ದಾರೆ.
‘ಹೈಕೋರ್ಟ್‌ನಿಂದ ಸಾಗುವಳಿ ಹಕ್ಕಿನ ಆದೇಶವನ್ನು 60 ರೈತರು ಪಡೆದಿದ್ದಾರೆ.
ಅವರ ಹೆಸರುಗಳನ್ನು ಗೇಣಿ ಮತ್ತು ಪಹಣಿ ಪತ್ರಿಕೆಯ ಸಾಗುವಳಿದಾರ ಕಾಲಂನಲ್ಲಿ ನೋಂದಣಿ ಮಾಡಬೇಕು’ ಎಂದು ರೈತರು ಆಗ್ರಹಿಸಿದರು.

ರೈತ ಮುಖಂಡ ಬಿಷ್ಟಪ್ಪ ಶಿಂದೆ ಮಾತನಾಡಿ, ‘ರಾಜ್ಯ ಸರ್ಕಾರ ಸರ್ವೆ ಮಾಡಿಸಿ ಎಲ್ಲಿ, ಯಾರು ಉಳುಮೆ ಮಾಡುತ್ತಾರೆ ಎಂಬುದರ ಜಮೀನು ನಕ್ಷೆ ಸಿದ್ಧಪಡಿಸಿದೆ. ಕೋರ್ಟಿಗೆ ಹೋಗಿ ಉಳುಮೆ ಹಕ್ಕು ಪಡೆದು ಬಂದಿದ್ದೇವೆ. ಈ ಆದೇಶ ಪ್ರತಿ ನೀಡಿದರೂ ತಹಶೀಲ್ದಾರ್ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅವರು ಯಾರದೋ ಪರ ಇಲ್ಲಿ ಕೆಲಸ ಮಾಡುತ್ತಿರುವ ಸಂದೇಹ ರೈತರಲ್ಲಿ ಮೂಡಿದೆ’ ಎಂದು ದೂರಿದರು.
‘ರೈತರ ಪರವಾಗಿ ಆದೇಶ ನೀಡಿದ ಪ್ರತಿಗಳನ್ನು ನಿಮಗೆ ನೀಡುತ್ತಿದ್ದೇವೆ. ಕೋರ್ಟ್ ಆದೇಶ ಗೌರವಿಸಿ ರೈತರ ಉಳುಮೆ ಕಾಲಂನಲ್ಲಿ ಅಥವಾ ಸಂಬಂಧಿಸಿದ ಕಾಲಂನಲ್ಲಿ ಹೆಸರು ನಮೂದಿಸಿ ಉತಾರ ಪೂರೈಸಬೇಕು. ಇದಕ್ಕೂ ವಿಳಂಬ ಮಾಡಿದರೆ ರೈತರು ಮತ್ತೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ’ ಎಂದು ಎಚ್ಚರಿಸಿದ ರೈತರು, ಕುಲವಳ್ಳಿ ಗುಡ್ಡದ ಜಮೀನುಗಳ ಸಂಪೂರ್ಣ ಮಾಹಿತಿ ಒಳಗೊಂಡ ಪ್ರತಿಯನ್ನು ತಹಶೀಲ್ದಾರ್‌ಗೆ ನೀಡಿದರು.
ಮುಖಂಡರಾದ ಅಪ್ಪೇಶ ದಳವಾಯಿ, ಮಡಿವಾಳಪ್ಪ ವರಗಣ್ಣವರ, ಅರ್ಜುನ ಮಡಿವಾಳರ, ದಶರಥ ಮಡಿವಾಳರ, ರಾಚಯ್ಯ ಒಕ್ಕುಂದಮಠ, ಕಾಶೀಂ ನೇಸರಗಿ ಸೇರಿ ಒಂಬತ್ತು ಹಳ್ಳಿಗಳ ರೈತರು, ಮಹಿಳೆಯರು ಇದ್ದರು.
Laxmi News 24×7