ಬೆಂಗಳೂರು: ಒಂದೆಡೆ ರಾಜ್ಯದಲ್ಲಿ ಭೀಕರ ಬರಗಾಲದಿಂದ ರೈತರು ಕಂಗಾಲಾಗಿದ್ದರೆ, ಮತ್ತೊಂದೆಡೆ ಏಕಾಏಕಿ ಸುರಿದ ಗುಡುಗು ಸಹಿತ ಮಳೆಯಿಂದಾಗಿ ಬೆಳೆ ನಷ್ಟ ಮತ್ತು ಜಾನುವಾರುಗಳು ಸಾಯುವ ಭೀತಿ ಎದುರಾಗಿದೆ.
ಏಪ್ರಿಲ್ ಕೊನೆಯ ವಾರದಿಂದ ರಾಜ್ಯದ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಬೆಳೆ ಹಾನಿಯಾಗಿದೆ.
ಚಾಮರಾಜನಗರ, ಮಂಡ್ಯ, ಮೈಸೂರು, ಹಾವೇರಿ, ಕಲಬುರಗಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ಅವಲಂಬಿಸಿರುವ ರೈತರು ಬಾಳೆ, ಈರುಳ್ಳಿ, ಟೊಮೇಟೊ ಸೇರಿದಂತೆ ಇತರೆ ಬೆಳೆಗಳನ್ನು ಕಳೆದುಕೊಂಡಿದ್ದಾರೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಜಿ ನಿರ್ದೇಶಕ ಶ್ರೀನಿವಾಸ್ ರೆಡ್ಡಿ, ಬಿರು ಬೇಸಿಗೆಯಿಂದ ರೈತರ ಬೆಳೆಗಳಿಗೆ ಈಗಾಗಲೇ ಹಾನಿಯಾಗಿದೆ. ಜನವರಿ ಅಥವಾ ಫೆಬ್ರುವರಿ ವೇಳೆಗೆ ಬಿತ್ತನೆ ಮಾಡಬೇಕಿತ್ತು ಆದರೆ ಈ ವರ್ಷ ಮಳೆಯಾಗಿಲ್ಲ. ಭೂಮಿ ನೀರಾವರಿ ಇರುವ ಅಥವಾ ಬೋರ್‌ವೆಲ್‌ಗಳನ್ನು ಅವಲಂಬಿಸಿರುವ ಪ್ರದೇಶಗಳಲ್ಲಿ ರೈತರು ಬೇಸಿಗೆ ಬೆಳೆಗಳನ್ನು ತೆಗೆದುಕೊಂಡರು. ದುರದೃಷ್ಟವಶಾತ್ ಕೆಲವೆಡೆ ಬೋರ್‌ವೆಲ್‌ಗಳು ಬತ್ತಿ ಹೋಗಿದ್ದು, ರೈತರು ಬೇರೆ ಮೂಲಗಳಿಂದ ನೀರು ಪೂರೈಸಲು ಹಣ ಪಾವತಿಸಿದ್ದಾರೆ. ಅಂತಹ ಬೆಳೆಗಳೂ ಹಾನಿಗೀಡಾಗಿವೆ ಎಂದರು.
ಭತ್ತ, ಜೋಳದ ಜತೆಗೆ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ಕೊಯ್ಲಿಗೆ ಸಿದ್ಧವಾಗಿದ್ದ ತೋಟಗಾರಿಕೆ ಬೆಳೆಗಳು ಹಾಳಾಗಿವೆ. ಅವುಗಳ ತೂಕ ಮತ್ತು ಭಾರೀ ಗಾಳಿಯಿಂದ ಗಿಡಗಳು ನೆಲಕ್ಕುರುಳುತ್ತಿದ್ದು, ಅಂತಹ ಬೆಳೆಗಳಿಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ.