ಬೆಂಗಳೂರು: ಈ ಬಾರಿಯ ಟಿ20 ವಿಶ್ವಕಪ್ ನಲ್ಲಿ (T20 World Cup) ಕನ್ನಡ ರಾರಾಜಿಸಲಿದೆ. ಹೌದು, ಈ ಬಾರಿ ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್ ಗೆ KMF ನಂದಿನಿ ಸ್ಪಾನ್ಸರ್ ಶಿಪ್ ಪಡೆದುಕೊಂಡಿದೆ. ಸದ್ಯ ನಂದಿನಿ ಲೋಗೋ ಇರುವ ಅಧಿಕೃತ ಜೆರ್ಸಿಯನ್ನು ಸ್ಕಾಟ್ಲೆಂಡ್ (Scotland) ಬಿಡುಗಡೆ ಮಾಡಿದೆ.
ಈ ಕುರಿತ ಫೋಟೋಗಳನ್ನು X ನಲ್ಲಿ ಅಧಿಕೃತವಾಗಿ ಸ್ಕಾಟ್ಲೆಂಡ್ ಕ್ರಿಕೆಟ್ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ. ಜೆರ್ಸಿಯ ಭುಜ ಮೇಲೆ ಕೆಎಂಎಫ್ ಲೋಗೋ ರಾರಾಜಿಸುತ್ತಿದ್ದು, ಕನ್ನಡದಲ್ಲೂ (Kannada) ನಂದಿನಿ ಎಂದು ಬರೆದಿರುವ ಲೋಗೋ ಬಳಸಲಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ಮಲೇಷಿಯಾ, ವಿಯೆಟ್ನಾಂ, ಸಿಂಗಾಪುರ, ಅಮೇರಿಕಾ, ದುಬೈ, ಯುಎಇ ಮುಂತಾದ ರಾಷ್ಟ್ರಗಳಲ್ಲಿ ಹೆಸರುವಾಸಿಯಾಗಿರುವ ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ ಈಗ T20 ವಿಶ್ವಕಪ್ ಪಂದ್ಯಕೂಟದಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಪ್ರಾಯೋಜಕತ್ವ ಪಡೆದಿದೆ. ರಾಜ್ಯದ ಉತ್ಕೃಷ್ಟ ಗುಣಮಟ್ಟದ ಹಾಲಿನ ಉತ್ಪನ್ನಗಳು ಮತ್ತು ನಾಡಿನ ರೈತರ ಶ್ರಮವೆರಡನ್ನೂ ವಿಶ್ವಕ್ಕೆ ಪರಿಚಯಿಸುವ ಸಂಕಲ್ಪ ನಮ್ಮದು. ನಂದಿನಿಯನ್ನು ಜಾಗತಿಕ ಬ್ರಾಂಡ್ ಆಗಿ ರೂಪಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ. ಈ ಬಾರಿ ವಿಶ್ವಕಪ್‌ನಲ್ಲಿ ರಾರಾಜಿಸಲಿದೆ ನಂದಿನಿ, ಕಂಗೊಳಿಸಲಿದೆ ಕನ್ನಡ ಎಂದು ಬರೆದುಕೊಂಡಿದ್ದಾರೆ.
ಜೂನ್ 01 ರಿಂದ 29 ವರೆಗೂ ವೆಸ್ಟ್ ಇಂಡೀಸ್ ಹಾಗೂ ಅಮೆರಿಕಾದಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಈ ಟೂರ್ನಿಯಲ್ಲಿ ಭಾಗಿಯಾಗುತ್ತಿರುವ ಎರಡು ತಂಡಗಳ ಜೆರ್ಸಿ ಮೇಲೆ ಕೆಎಂಎಫ್ ಲೋಗೋ ಅನಾವರಣಗೊಳ್ಳಲಿದೆ. ಅಲ್ಲದೇ ಪಂದ್ಯಾವಳಿ ಸಮಯದಲ್ಲಿ ಜಾಹೀರಾತು, ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಸಿಗಲಿದೆ. ಪರಿಣಾಮ ಜಾಗತಿಕ ಮಟ್ಟದಲ್ಲಿ ನಂದಿನಿ ಉತ್ಪನ್ನಗಳ ಪ್ರಚಾರ ಲಭ್ಯವಾಗಲಿದೆ. ಸಣ್ಣ ತಂಡಗಳೊಂದಿಗೆ ಪಾಲುದಾರಿಕೆ ಮಾಡುವ ಮೂಲಕ ಕಡಿಮೆ ವೆಚ್ಚದಲ್ಲಿ ಬ್ರ್ಯಾಂಡ್ ಮಾಡಲು ಕೆಎಂಎಫ್ ಮುಂದಾಗಿದೆ.
Laxmi News 24×7