ಬೆಂಗಳೂರು: ಹಾಸನದ ಅಶ್ಲೀಲ ಪೆನ್‌ಡ್ರೈವ್ ಪ್ರಕರಣದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗಾಗಿ ವಿಶೇಷ ತನಿಖಾ ತಂಡವು (ಎಸ್‌ಐಟಿ) ತಲಾಶ್ ಚುರುಕುಗೊಳಿಸಿದ್ದು, ಜರ್ಮನಿಯ ಕೆಲವು ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಂಸದ ಪ್ರಜ್ವಲ್ ರೇವಣ್ಣ ಪತ್ತೆಗಾಗಿ ಎಸ್‌ಐಟಿ ತಂಡವು ಹುಡುಕಾಟ ಮುಂದುವರೆಸಿದೆ.
ಈ ನಿಟ್ಟಿನಲ್ಲಿ ಜರ್ಮನಿಯ ಕೆಲ ಅಧಿಕಾರಿಗಳ ಸಂಪರ್ಕ ಸಾಧಿಸಿರುವ ಎಸ್‌ಐಟಿ ಅವರಿಂದ ಮಾಹಿತಿ ಕಲೆ ಹಾಕುತ್ತಿದೆ. ಆದರೆ, ನಿಖರವಾಗಿ ಪ್ರಜ್ವಲ್ ರೇವಣ್ಣ ವಾಸಿಸುತ್ತಿರುವ ಪ್ರದೇಶದ ಕುರಿತು ಖಚಿತತೆ ಸಿಕ್ಕಿಲ್ಲ. ವಿದೇಶಿ ಅಧಿಕಾರಿಗಳು ಎಸ್‌ಐಟಿ ತಂಡಕ್ಕೆ ತಮ್ಮ ವ್ಯಾಪ್ತಿಯಲ್ಲಿ ಕೊಡಬಹುದಾದ ಕೆಲವು ಮಾಹಿತಿಗಳನ್ನು ಕೊಟ್ಟಿದ್ದಾರೆ ಎಂದು ಗೊತ್ತಾಗಿದೆ.
ಪ್ರಜ್ವಲ್ ಭಾರತಕ್ಕೆ ವಾಪಸಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಎಸ್‌ಐಟಿಯು ಇದುವರೆಗೆ ಕಾದು ನೋಡುವ ತಂತ್ರ ಅನುಸರಿಸಿತ್ತು. ಇದೀಗ ಪ್ರಜ್ವಲ್ ಸದ್ಯ ಭಾರತಕ್ಕೆ ಮರಳುವುದೇ ಅನುಮಾನ ಎಂಬುದು ಗೊತ್ತಾಗುತ್ತಿದ್ದಂತೆ ವಿದೇಶಿ ಅಧಿಕಾರಿಗಳ ಸಂಪರ್ಕ ಸಾಧಿಸಿ ಮಾಹಿತಿ ಕಲೆ ಹಾಕಲು ಮುಂದಾಗಿದೆ.
ಎಸ್‌ಐಟಿಗೆ ದೊಡ್ಡ ತಲೆನೋವು
ಪ್ರಜ್ವಲ್ ಜರ್ಮನಿಯಲ್ಲೇ ಇರುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದ್ದು, ಇಷ್ಟಾದರೂ ಪ್ರಜ್ವಲ್ ಬಂಧಿಸುವುದೇ ಎಸ್‌ಐಟಿಗೆ ದೊಡ್ಡ ತಲೆನೋವಾಗಿದೆ. ಪ್ರಜ್ವಲ್ ಬಗ್ಗೆ ನಿಖರವಾದ ಮಾಹಿತಿ ಸಿಕ್ಕಿದರೆ ಮುಂದಿನ ಕ್ರಮ ಕೈಗೊಳ್ಳಲು ಎಸ್‌ಐಟಿ ಚಿಂತನೆ ನಡೆಸಿದೆ. ಸದ್ಯ ಸಂತ್ರಸ್ತೆಯರ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತಿದೆ.