ಬೆಂಗಳೂರು, ನ.19- ಕನ್ನಡಿಗರನ್ನು ಕಡೆಗಣಿಸುತ್ತಿರುವ ಸರ್ಕಾರದ ಧೋರಣೆ ಖಂಡನೀಯ. ಯಾವುದೇ ಧಮ್ಕಿಗೂ ಹೆದರುವುದಿಲ್ಲ, ಜಗ್ಗುವುದಿಲ್ಲ. ಉಸಿರು ಇರುವವರೆಗೂ ಹೋರಾಡುತ್ತೇವೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ. ಇಂದು ವಿಧಾನಸೌಧದ ದೇವರಾಜ ಅರಸು ಪ್ರತಿಮೆ ಮುಂಭಾಗ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ವಾಟಾಳ್ ನಾಗರಾಜ್ , ಸಾ.ರಾ.ಗೋವಿಂದು ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ತಡೆದು ವಶಕ್ಕೆ ಪಡೆದರು.
ಇದಕ್ಕೂ ಮುನ್ನ ಮಾತನಾಡಿದ ವಾಟಾಳ್, ಸರ್ಕಾರ ತನ್ನ ಧೋರಣೆಯನ್ನು ಬದಲಿಸದಿದ್ದರೆ ಡಿ.5ರಂದು ಅಖಂಡ ಕರ್ನಾಟಕ ಬಂದ್ ನಡೆಯಲಿದೆ. ಇದರಲ್ಲಿ ಯಾವುದೇ ರಾಜಿಯ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.ಹೀಗೆ ಅನ್ಯ ಭಾಷಿಗರನ್ನು ಓಲೈಸಲು ಪ್ರಾಧಿಕಾರ ರಚನೆಗೆ ಮುಂದಾಗುತ್ತಿದ್ದಾರೆ. ಯಡಿಯೂರಪ್ಪನವರು ತಮ್ಮ ಸ್ಥಾನದಿಂದ ಕೆಳಗಿಳಿಯುವವರೆಗೂ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ವಾಟಾಳ್ ಎಚ್ಚರಿಸಿದರು. ಇದುವರೆಗೂ ಯಾವ ಮುಖ್ಯಮಂತ್ರಿ ಹೀನ ನಿರ್ಧಾರ ಕೈಗೊಂಡಿರಲಿಲ್ಲ. ಕನ್ನಡ ವಿರೋಧಿ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ದುರದೃಷ್ಟಕರ ಎಂದು ಕಿಡಿಕಾರಿದ್ದಾರೆ.
Laxmi News 24×7