ಶಿವಮೊಗ್ಗ: ‘ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ಗೀತಾ ಶಿವರಾಜಕುಮಾರ್ ಡಮ್ಮಿ ಅಭ್ಯರ್ಥಿ ಅಲ್ಲ, ಅವರನ್ನು ಆಯ್ಕೆ ಮಾಡುವಲ್ಲಿ ಯಾವುದೇ ಒಳ ಒಪ್ಪಂದ ರಾಜಕಾರಣ ಕಾಂಗ್ರೆಸ್ ಮಾಡಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಶಿವಮೊಗ್ಗ ಕ್ಷೇತ್ರದ ಚುನಾವಣಾ ಉಸ್ತುವಾರಿ ಮಂಜುನಾಥ ಭಂಡಾರಿ ಸ್ಪಷ್ಟಪಡಿಸಿದರು.
ನಗರದಲ್ಲಿ ಸೋಮವಾರ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಮಂಜುನಾಥ ಭಂಡಾರಿ, ‘2014 ರ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ನಾನು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದೆನು. ಗೀತಾ ಶಿವರಾಜಕುಮಾರ್ ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಆಗ ಮತಗಳು ವಿಭಜನೆಯಾಗಿದ್ದರಿಂದ ಇಬ್ಬರೂ ಸೋಲಬೇಕಾಯಿತು. ಗೀತಾ ಅವರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದಾರೆ. ಅವರ ತಂದೆ ಬಂಗಾರಪ್ಪನವರ ಹೆಸರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟ ಗ್ಯಾರಂಟಿ ಕಾರ್ಯಕ್ರಮಗಳಿಂದ ಈ ಬಾರಿ ನಿಶ್ಚಿತವಾಗಿ ಗೆಲುವು ಸಾಧಿಸಲಿದ್ದಾರೆ’ ಎಂದು ಹೇಳಿದರು.

ಬಿಜೆಪಿಯಿಂದ ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಮುಗಿಸುವ ಕೆಲಸ ನಡೆದಿದೆ. ಹೀಗಾಗಿ ಸಂವಿಧಾನಕ್ಕೆ ಬಿಕ್ಕಟ್ಟು ಬಂದಿದೆ ಎಂದು ಆರೋಪಿಸಿದ ಅವರು, ಬಿಜೆಪಿ ಸಿಬಿಐ, ಇ.ಡಿ ಯಂತಹ ಸಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಂಡು ಬೇರೆ ಬೇರೆ ಪಕ್ಷಗಳಲ್ಲಿನ ಭ್ರಷ್ಟರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಅವರನ್ನು ನಿರಪರಾಧಿ ಎಂದು ಕ್ಲೀನ್ ಚಿಟ್ ನೀಡಿ ಶುದ್ದೀಕರಿಸುತ್ತಿದೆ. ಅರವಿಂದ ಕೇಜ್ರಿವಾಲ್ ಅವರನ್ನು ಚುನಾವಣಾ ಸಮಯದಲ್ಲಿ ಜೈಲಿಗೆ ಕಳುಹಿಸುವ ಮೂಲಕ ಪ್ರತಿಪಕ್ಷಗಳನ್ನು ಹತ್ತಿಕ್ಕುವ ಕೆಲಸ ನಡೆದಿದೆ. ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳ ಬಂದ್ ಮಾಡುವ ಮೂಲಕ ಚುನಾವಣೆ ಗೆಲ್ಲಲು ಹೊರಟಿದೆ ಎಂದರು.
Laxmi News 24×7