ಚಿಕ್ಕೋಡಿ: ಲಾಕ್‍ಡೌನ್ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ. ಶನಿವಾರ ಲಾಕ್‍ಡೌನ್ ಮಾಡುವ ವಿಚಾರ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಡಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಅಂಬೇಡ್ಕರ್ ಭವನ ಹಾಗೂ ನೂತನ ಪ್ರವಾಸಿ ಮಂದಿರ ಉದ್ಘಾಟಿಸಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರ ಸುರಕ್ಷತೆಗಾಗಿ ಶನಿವಾರ ಹಾಗೂ ಭಾನುವಾರ ಲಾಕ್ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಮದುವೆ ಕಾರ್ಯಕ್ರಮಗಳಿಂದ ಹೆಚ್ಚಿನ ಕೊರೊನಾ ಪ್ರಕರಣ ಬಂದ ಕಾರಣ ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗಿದೆ ಎಂದರು.
ಸರ್ಕಾರ ಕೋವಿಡ್-19 ನಿರ್ವಹಣೆಯಲ್ಲಿ ವಿಫಲವಾಗಿಲ್ಲ. ಸರ್ಕಾರ ಸಂಪೂರ್ಣ ಜವಾಬ್ದಾರಿಯುತ ಕೆಲಸ ಮಾಡುತ್ತಿದೆ. ಸಾವು ನೋವುಗಳನ್ನು ತಡೆಯುವಲ್ಲಿ ಸರ್ಕಾರ ಯಶಸ್ವಿಯಾಗಿ ಕೆಲಸ ಮಾಡಿದೆ. ಆದರೆ ಸರ್ಕಾರ ಸಂಕಷ್ಟದಲ್ಲಿದೆ ನಮ್ಮ ಸಂಕಷ್ಟವನ್ನು ಯಾರಿಗೆ ಹೇಳಬೇಕು ಎಂದು ಬಸವಣ್ಣನವರ ವಚನ ಹೇಳಿದರು.
ನಿಪ್ಪಾಣಿಯಲ್ಲಿ ನಡೆದ ಅಂಬೇಡ್ಕರ್ ಭವನ ಉದ್ಘಾಟನೆ, ವಾಣಿಜ್ಯ ತೆರಿಗೆ ಇಲಾಖೆ ಕಚೇರಿ ಉದ್ಘಾಟನೆ ಹಾಗೂ ನೂತನ ಪ್ರವಾಸಿ ಮಂದಿರ ಉದ್ಘಾಟನೆಯಲ್ಲಿ ಸಾಮಾಜಿಕ ಅಂತರ ಹಾಗೂ ಕೊವಿಡ್-19 ನಿಯಮಗಳನ್ನು ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ್ ಸವದಿ ಹಾಗೂ ಗೋವಿಂದ್ ಕಾರಜೋಳ ಗಾಳಿಗೆ ತೂರಿದ್ದರು.