ರಾಯಚೂರು: ಅರವತ್ತು ವರ್ಷ ಮೇಲ್ಪಟ್ಟವರಿಗೆ ಕೊರೊನಾ ಸೋಂಕು ತಗುಲಿದರೆ ಪ್ರಾಣಾಪಾಯ ಹೆಚ್ಚು ಅನ್ನೋದನ್ನ ರಾಯಚೂರಿನ 12 ಜನ ವೃದ್ಧರು ಮೆಟ್ಟಿನಿಂತು ಮಹಾಮಾರಿ ವಿರುದ್ಧ ಗೆದ್ದು ಹೊರಬಂದಿದ್ದಾರೆ. 60 ರಿಂದ 73 ವರ್ಷದ ಮಧ್ಯದ 12 ಜನರು ಕೊರೊನಾ ಸೋಂಕಿನಿಂದ ಗೆದ್ದು ಬಂದು ಸಂಪೂರ್ಣ ಗುಣಮುಖರಾಗುವ ಮೂಲಕ ಸೋಂಕಿತರಲ್ಲಿನ ಭಯ ಹೋಗಲಾಡಿಸಲು ಮಾದರಿಯಾಗಿದ್ದಾರೆ
ಜಿಲ್ಲೆಯಲ್ಲಿ ಇದುವರೆಗೆ 631 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 442 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೂ ಒಟ್ಟು 7 ಜನ ಸೋಂಕಿತರ ಸಾವು ಜರುಗಿದ್ದು, ಅವರಲ್ಲಿ ಮೂವರು 60 ವರ್ಷ ಮೇಲ್ಪಟ್ಟವರಿದ್ದಾರೆ. ಮೃತಪಟ್ಟವರಲ್ಲಿ ಕೂಡಾ ಇನ್ನಿತರ ಆರೋಗ್ಯ ಸಮಸ್ಯೆಗಳು ಕಂಡು ಬಂದಿದ್ದು, ಆ ಕಾರಣಕ್ಕೆ ಕೊರೊನಾ ಸೋಂಕಿಗಿಂತ ಇನ್ನಿತರ ಆರೋಗ್ಯ ಸಮಸ್ಯೆಗಳು ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಜೊತೆಗೆ ಜಿಲ್ಲೆಯಲ್ಲಿ ತೀವ್ರ ಉಸಿರಾಟದ ಸಮಸ್ಯೆಯಿಂದ ವೆಂಟಿಲೇಟರ್‍ನಲ್ಲಿರಿಸಬೇಕಾದ ಪ್ರಕರಣಗಳು ಕಡಿಮೆಯಿದೆ ಎನ್ನಲಾಗುತ್ತಿದೆ.
ಜಿಲ್ಲೆಯಲ್ಲಿ ಸೋಂಕು ಕಾಣಿಸಿಕೊಂಡ ನಂತರದಲ್ಲಿ ಇದುವರೆಗೂ 60 ವರ್ಷ ಮೇಲ್ಪಟ್ಟ 12 ಜನರು ಗುಣಮುಖರಾಗಿ ಹೋಂ ಕ್ವಾರಂಟೈನ್‍ನಲ್ಲಿದ್ದು ಬಹುತೇಕರು ಆರೋಗ್ಯವಂತರಾಗಿದ್ದಾರೆ. ಒಂದಿಬ್ಬರನ್ನು ಹೊರತುಪಡಿಸಿ ಬಹುತೇಕರು 15 ದಿನದೊಳಗೆ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾಗಿರುವ 12 ಜನರಲ್ಲಿ 73, 70 ಮತ್ತು 63 ವಯೋಮಾನದ ತಲಾ ಒಬ್ಬರಿದ್ದು, 65 ವಯೋಮಾನದ 5 ಮತ್ತು 60 ವರ್ಷದ ನಾಲ್ವರಿದ್ದಾರೆ. ಇವರಲ್ಲಿ ರಾಯಚೂರು ಮತ್ತು ದೇವದುರ್ಗ ತಾಲೂಕಿನ ತಲಾ ಐವರು ಹಾಗೂ ಮಾನ್ವಿ ತಾಲೂಕಿನ ಇಬ್ಬರಿದ್ದಾರೆ.
ಗುಣಮುಖರಾಗಿರುವ ವೃದ್ಧರು ಕೊರೊನಾಗೆ ಭಯಪಡುವ ಅಗತ್ಯವಿಲ್ಲ ಅಂತ ಧೈರ್ಯದ ಮಾತುಗಳನ್ನ ಹೇಳಿದ್ದಾರೆ. ನೆಗಡಿ, ಜ್ವರಕ್ಕೆ ಚಿಕಿತ್ಸೆ ಪಡೆಯಲು ಹೋದಾಗ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ಆಸ್ಪತ್ರೆಯಲ್ಲಿ 10 ದಿನಗಳ ಕಾಲ ಇದ್ದೆ. ವೈದ್ಯರು ನೀಡಿದ ಚಿಕಿತ್ಸೆಯಿಂದ ಗುಣಮುಖನಾಗಿದ್ದು, ಆಸ್ಪತ್ರೆಯಲ್ಲಿ ನಿಯಮಿತವಾಗಿ ಉಪಹಾರ, ಊಟವನ್ನು ನೀಡಲಾಗುತ್ತಿದ್ದು, ಸೋಂಕಿಗೆ ಭಯಭೀತರಾಗುವುದನ್ನು ಬಿಟ್ಟರೆ ಅದರಿಂದ ಆದಷ್ಟು ಬೇಗ ಗುಣಮುಖರಾಗಬಹುದು ಅಂತ ಕೊರೊನಾ ಗೆದ್ದ ವೃದ್ಧರೊಬ್ಬರು ತಮ್ಮ ಅನುಭವವನ್ನ ಹಂಚಿಕೊಂಡಿದ್ದಾರೆ.