ಬೆಳಗಾವಿ: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿ ಐದು ದಿನಗಳಾದರೂ ಬೆಳಗಾವಿ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಎಂಬುದನ್ನು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಇನ್ನೂ ಬಹಿರಂಗವಾಗಿ ಘೋಷಿಸಿಲ್ಲ. ಒಂದು ಹಳೆ ಮುಖ, ಇನ್ನೊಂದು ಹೊಸ ಮುಖದ ಹೆಸರು ಮಾತ್ರ ಕಾರ್ಯಕರ್ತರ ಬಾಯಿಯಲ್ಲಿ ಓಡಾಡುತ್ತಿವೆ.
ಬೆಳಗಾವಿ ಕ್ಷೇತ್ರ ಕಳೆದ ಐದು ಚುನಾವಣೆಗಳಿಂದ ಬಿಜೆಪಿ ಭದ್ರಕೋಟೆ ಎಂದು ನಿರೂಪಿಸಿದೆ. ದಿವಂಗತ ಸುರೇಶ ಅಂಗಡಿ ಅವರು 2004, 2009, 2014, 2019 ಹೀಗೆ ಸತತ ನಾಲ್ಕು ಬಾರಿ ವಿಜಯ ಸಾಧಿಸಿದ್ದರು. ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿದ್ದ ಅವರು ಕೊರೊನಾ ಸಂದರ್ಭದಲ್ಲಿ ಅಕಾಲಿಕ ನಿಧನರಾದರು. 2020ರಲ್ಲಿ ನಡೆದ ಉಪಚುನಾವಣೆಯಲ್ಲಿ ಅವರ ಪತ್ನಿ ಮಂಗಲಾ ಅಂಗಡಿ ಮತ್ತೆ ಬಿಜೆಪಿಯಿಂದ ಗೆದ್ದರು.
ಐದು ಬಾರಿ ಇಲ್ಲಿನ ಮತದಾರ ಬಿಜೆಪಿಗೆ ಭದ್ರನೆಲೆ ಕಟ್ಟಿಕೊಟ್ಟಿದ್ದಾನೆ. ಆದರೂ ಕಣ್ಣುಮುಚ್ಚಿ ಒಬ್ಬ ಸಮರ್ಥ ಅಭ್ಯರ್ಥಿಯನ್ನು ಮುಂಚಿತವಾಗಿ ಘೋಷಣೆ ಮಾಡುವಂಥ ಎದೆಗಾರಿಕೆ ಕಮಲ ಪಾಳೆಯ ತೋರಿಸಲಿಲ್ಲ. ಜಗದೀಶ ಶೆಟ್ಟರ್ ಅವರ ಅನಿರೀಕ್ಷಿತ ಪ್ರವೇಶ ಕ್ಷೇತ್ರದ ರಾಜಕೀಯ ಲೆಕ್ಕಾಚಾರಗಳನ್ನೇ ಬುಡಮೇಲು ಆಗಿದೆ.
ಜಗದೀಶ ಶೆಟ್ಟರ್ ಸ್ಪರ್ಧಿಸುವುದು ಖಾತ್ರಿ ಎಂದು ಬಿಜೆಪಿ ವಲಯ ನಿರ್ಧರಿಸಿತ್ತು. ಮೊದಲ ಪಟ್ಟಿಯಲ್ಲಿ ಹೆಸರು ಘೋಷಣೆ ಆಗದ ಕಾರಣ ಮತ್ತೆ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ. ಕೆಲ ಆಕಾಂಕ್ಷಿಗಳ ತಂಡ ಹಾಗೂ ಕಾರ್ಯಕರ್ತರು ಟಿಕೆಟ್ ತಪ್ಪಿಸಲು ಇನ್ನಿಲ್ಲದ ಸಾಹಸ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.