ಮುಂಬೈ, :- ಎರಡನೇ ಹಂತದ ಕೋವಿಡ್ ಸೋಂಕಿನ ಅಲೆ ಅಪ್ಪಳಿಸುವ ಆತಂಕದ ನಡುವೆಯೂ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿರುವ ಮಹಾರಾಷ್ಟ್ರ ಸರ್ಕಾರ ಸುರಕ್ಷತೆ ದೃಷ್ಟಿಯಿಂದ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ.
ದೇವಸ್ಥಾನ, ಚರ್ಚ್ ಹಾಗೂ ಮಸೀದಿಗಳಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು ಹಾಗೂ ಸ್ಯಾನಿಟೈಸರ್ ಬಳಸಬೇಕು. ದೇವರ ಪ್ರತಿಮೆ, ಪವಿತ್ರ ಗ್ರಂಥಗಳು ಸೇರಿದಂತೆ ಯಾವುದೇ ವಸ್ತುಗಳನ್ನು ಮುಟ್ಟುವಂತಿಲ್ಲ. ತೀರ್ಥ, ಪ್ರಸಾದ ವಿತರಣೆಯನ್ನು ನಿಷೇಸಲಾಗಿದೆ.
ಪಾದರಕ್ಷೆಗಳನ್ನು ಧಾರ್ಮಿಕ ಕೇಂದ್ರಗಳಿಂದ ಹೊರಗಡೆ ಬಿಡಬೇಕು. ಧ್ವನಿ ಮುದ್ರಿತ ಭಕ್ತಿ ಸಂಗೀತವನ್ನು ಮಾತ್ರ ಹಾಕಬೇಕು. ಗುಂಪು ಗುಂಪಾಗಿ ಹಾಡುವುದನ್ನು ನಿಷೇಸಲಾಗಿದೆ.
ಭಕ್ತರು ಪ್ರಾರ್ಥಿಸಲು ತಮ್ಮದೇ ಆದ ಮ್ಯಾಟ್ ಅಥವಾ ಬಟ್ಟೆ ತೆಗೆದುಕೊಂಡು ಬರಬೇಕು. ನಂತರ ಅದನ್ನು ವಾಪಸ್ ತೆಗೆದುಕೊಂಡು ಹೋಗಬೇಕು.ದಿನದಲ್ಲಿ ಹಲವಾರು ಬಾರಿ ಧಾರ್ಮಿಕ ಕೇಂದ್ರಗಳನ್ನು ಶುಚಿಗೊಳಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರ ತಾಕೀತು ಮಾಡಿದೆ. ಜನವರಿಯಲ್ಲಿ ಮಹಾರಾಷ್ಟ್ರಕ್ಕೆ ಎರಡನೇ ಹಂತದ ಕೊರೊನಾ ಅಲೆ ಅಪ್ಪಳಿಸಲಿದೆ ಎಂಬ ಆತಂಕವಿದೆ.