ಬೆಳಗಾವಿ: 2006ರ ನಂತರ ನೇಮಕವಾಗಿರುವ ರಾಜ್ಯ ಸರಕಾರಿ ನೌಕರರಿಗೆ ಈಗ ಇರುವ ಹೊಸ ಪಿಂಚಣಿ ಯೋಜನೆ (New Pension Scheme) ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ (Old Pension Scheme) ಮರು ಜಾರಿಗೊಳಿಸುವುದು ಖಚಿತ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar) ಸ್ಪಷ್ಟವಾಗಿ ಹೇಳಿದರು.
ಬೆಳಗಾವಿಯ (Belagavi News) ಗಾಂಧಿ ಭವನದಲ್ಲಿ ಭಾನುವಾರ, ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಮಹಾ ಸಮ್ಮೇಳನ, ಅಲ್ಪ ಸಂಖ್ಯಾತರ ಕಲ್ಯಾಣ ಹಾಗೂ ಶೈಕ್ಷಣಿಕ, ಔದ್ಯೋಗಿಕ ಯೋಜನೆಗಳ ಅರಿವು ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಚೆಗೆ ರಾಜ್ಯ ಸರಕಾರಿ ನೌಕರರ ಸಮ್ಮೇಳನದಲ್ಲಿ ಭಾಗವಹಿಸಿ, ಹಳೆ ಪಿಂಚಣಿ ಯೋಜನೆ ಜಾರಿ ಮತ್ತು 7ನೇ ವೇತನ ಆಯೋಗದ ವರದಿ ಜಾರಿ ಕುರಿತು ಸ್ಪಷ್ಟವಾಗಿ ಭರವಸೆ ನೀಡಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನವೋ, ಚುನಾವಣೆಯ ನಂತರವೋ ಎನ್ನುವುದಷ್ಟೇ ಸ್ಪಷ್ಟವಾಗಬೇಕಿದೆ. ಆದರೆ ಈ ವಿಷಯದಲ್ಲಿ ಯಾರಿಗೂ ಅನುಮಾನ ಬೇಡ. ಸರಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿದೆ ಎಂದು ಹೆಬ್ಬಾಳಕರ್ ಸ್ಪಷ್ಟಪಡಿಸಿದರು.