ಹುಬ್ಬಳ್ಳಿ: ನಗರದಲ್ಲಿ ಪ್ರಮುಖ ರಸ್ತೆಗಳು ಸಂಧಿಸುವ ರಾಣಿ ಚನ್ನಮ್ಮ ವೃತ್ತದಲ್ಲಿ ಫ್ಲೈಓವರ್ ನಿರ್ಮಾಣ ಕಾಮಗಾರಿ ಸೇರಿದಂತೆ ವಿವಿಧೆಡೆ ನನೆಗುದಿಗೆ ಬಿದ್ದಿದ್ದ ರಸ್ತೆ ಕಾಮಗಾರಿಗಳನ್ನು ಏಕಕಾಲಕ್ಕೆ ಆರಂಭಿಸಲಾಗಿದೆ. ಇದರಿಂದ ಚನ್ನಮ್ಮ ವೃತ್ತದಲ್ಲಿ ಸೋಮವಾರ ದಿನವಿಡೀ ವಾಹನಗಳ ಸಂಚಾರ ದಟ್ಟಣೆ ಏರ್ಪಟ್ಟಿತ್ತು.
ಚನ್ನಮ್ಮ ವೃತ್ತದಿಂದ ಯುರೇಕಾ ಟವರ್ ಪಕ್ಕದಿಂದ ನವಲಗುಂದದತ್ತ ವಾಹನಗಳು ಸಂಚರಿಸುವುದನ್ನು ಬಂದ್ ಮಾಡಲಾಗಿದ್ದು, ಪರ್ಯಾಯವಾಗಿ ಕಾಮತ್ ಹೋಟೆಲ್ ಎದುರು ದ್ವಿಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಕ್ಕಟ್ಟಿನಲ್ಲಿ ವಾಹನಗಳು ಆಮೆಗತಿಯಲ್ಲಿ ಸಂಚರಿಸುತ್ತಿದ್ದು, ದಟ್ಟಣೆ ವಿಪರೀತವಾಗಿದೆ.
ಇದಲ್ಲದೆ, ವಾಹನಗಳು ಸಂಚರಿಸುವ ಪರ್ಯಾಯ ಮಾರ್ಗಗಳ ಮಾಹಿತಿ ಗೊತ್ತಿರದ ಚಾಲಕರು ಗೊಂದಲಕ್ಕೀಡಾದರು. ಮಾರ್ಗದಲ್ಲಿ ಸಿಗುವ ಜನರನ್ನು ವಿಚಾರಿಸಿಕೊಂಡು ವಾಹನಗಳನ್ನು ಚಲಾಯಿಸುತ್ತಿರುವ ಕಾರಣದಿಂದಲೂ ಸಂಚಾರ ದಟ್ಟಣೆ ಉಂಟಾಯಿತು. ಅಲ್ಲಲ್ಲಿ ನಿಯೋಜಿಸಲಾಗಿದ್ದ ಸಂಚಾರ ಪೊಲೀಸರು ಕೂಡಾ ವಾಹನಗಳ ದಟ್ಟಣೆ ನಿರ್ವಹಿಸುವುದಕ್ಕೆ ಹರಸಾಹಸ ಪಡುತ್ತಿರುವುದು ಕಂಡುಬಂತು.