ನವದೆಹಲಿ, ಫೆ.3- ನಮ್ಮ ಸರ್ಕಾರವನ್ನು ಅಸ್ಥಿರಗೊಳಿ ಸಲು ಸಂಚು ರೂಪಿಸಿರುವ ಬಿಜೆಪಿ ಆಮ್ ಆದ್ಮಿ ಪಕ್ಷದ ಏಳು ಶಾಸಕರನ್ನು ಖರೀದಿಸಲು ಪ್ರಯತ್ನಿಸುತ್ತಿದೆ. ಇವರಿಗೆ ತಲಾ 25 ಕೋಟಿ ರೂ. ಆಫರ್ ನೀಡಿದೆ ಎಂದು ಆರೋಪಿಸಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿ ಅಪರಾಧ ವಿಭಾಗದ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಕಳೆದ ವಾರ ಪತ್ರಿಕಾಗೋಷ್ಠಿಯಲ್ಲಿ ದೆಹಲಿ ಸಚಿವೆ ಅತಿಶಿ, ಬಿಜೆಪಿ ತನ್ನ ಏಳು ಶಾಸಕರಿಗೆ ಪಕ್ಷ ತೊರೆಯಲು ತಲಾ 25 ಕೋಟಿ ರೂ.ಗಳನ್ನು ನೀಡುವುದಾಗಿ ಆಫರ್ ಮಾಡಿದ್ದು, ಕೇಜ್ರಿವಾಲ್ ಸರ್ಕಾರವನ್ನು ಉರುಳಿಸುವುದಾಗಿ ಬೆದರಿಕೆ ಹಾಕಿದರು. ಪಕ್ಷದ ಶಾಸಕರೊಬ್ಬರನ್ನು ಸಂಪರ್ಕಿಸಿದ ವ್ಯಕ್ತಿಯ ವಾಯ್ಸ ರೆಕಾರ್ಡ್ ಲಭ್ಯವಿದ್ದು, ಅದನ್ನು ನಂತರ ತೋರಿಸಲಾಗುವುದು ಎಂದು ಆರೋಪಿಸಿದ್ದರು.