ಬೆಳಗಾವಿ: ‘ಬೆಳಗಾವಿ ಜಿಲ್ಲಾ ಕೋಳಿ ಬೆಸ್ತ ಸಮಾಜ ಸಂಘ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ಆಶ್ರಯದಲ್ಲಿ ನಗರದ ಸರ್ದಾರ್ ಮೈದಾನದಲ್ಲಿ ಫೆಬ್ರುವರಿ 4ರಂದು ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತಿ ಹಾಗೂ ಸಮಾಜದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಸಾಯಬಣ್ಣ ತಳವಾರ ಹೇಳಿದರು.
‘ಕೋಲಿ, ಕಬ್ಬಲಿಗ, ಬೆಸ್ತ ಮುಂತಾಗಿ ಎಲ್ಲ ಉಪನಾಮಗಳನ್ನೂ ಒಳಗೊಂಡು ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಮೂರು ದಶಕಗಳಿಂದ ಹೋರಾಟ ಮಾಡುತ್ತಲೇ ಬರಲಾಗಿದೆ. ಆದರೆ, ಯಾವುದೇ ಸರ್ಕಾರ ಇದೂವರೆಗೆ ಸ್ಪಂದಿಸಿಲ್ಲ. ಹೀಗಾಗಿ, ಈ ಬಾರಿಯ ಬೆಳಗಾವಿ ಸಮಾವೇಶದಲ್ಲಿ ಮಹತ್ವದ ಹೆಜ್ಜೆ ಇಡಲಾಗುವುದು’ ಎಂದು ಅವರು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಕೋಳಿ ಸಮಾಜವು ತೀರ ಹಿಂದುಳಿದಿದೆ. ಇವರು ಬುಡಕಟ್ಟು ಸಮುದಾಯಕ್ಕೆ ಸೇರಿದವರು, ದೇಶದ ಮೂಲ ನಿವಾಸಿಗಳು ಎಂದು ಬ್ರಿಟಿಷ್ ಸರ್ಕಾರವೇ ದಾಖಲೆ ನೀಡಿದೆ. ಸ್ವಾತಂತ್ರ್ಯ ಬಂದ ನಂತರ ಹಾಗೂ ಪ್ರಾಂತ್ಯಗಳು ಪುನರ್ ವಿಂಗಡಣೆಯಾದ ಬಳಿಕ ಬಂದ ಎಲ್ಲ ಆಯೋಗಗಳು ಈ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದೇ ವರದಿ ನೀಡಿವೆ. ನಾಗನಗೌಡ ಆಯೋಗದ ವರದಿ, ಚಿನ್ನಪ್ಪರೆಡ್ಡಿ ಆಯೋಗದ ವರದಿಗಳು ಕೂಡ ಇದನ್ನು ಪುಷ್ಟೀಕರಿಸಿವೆ. ಆದರೂ ಸರ್ಕಾರಗಳು ಈ ವರದಿಗಳನ್ನು ಪುರಸ್ಕಾರ ಮಾಡಿಲ್ಲ’ ಎಂದರು.
‘ನಮ್ಮೊಂದಿಗೇ ಇದ್ದ ಬೇಡರ, ನಾಯಕ ಇತರ ಪರ್ಯಾಯ ಪದಗಳ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ. ಆದರೆ, ಬೆಸ್ತರನ್ನು ಮಾತ್ರ ಇನ್ನೂ ಹೊರಗಿಟ್ಟಿದ್ದಾರೆ. ನಮ್ಮ ಸಮಾಜಕ್ಕೆ ರಾಜಕೀಯ ಶಕ್ತಿ ಇಲ್ಲದಿರುವುದೇ ಇದಕ್ಕೆ ಕಾರಣ’ ಎಂದರು.