ಬೆಂಗಳೂರು: ನಿರೀಕ್ಷೆಯಂತೆ ಪಿಎಸ್‌ಐ ಮರುಪರೀಕ್ಷೆ ಬಹಳ ಸುಗಮವಾಗಿ ನಡೆದಿದೆ. ಇದರ ಬಳಿಕ 403 ಹುದ್ದೆಗಳ ಆಯ್ಕೆಗೆ ಲಿಖಿತ ಪರೀಕ್ಷೆ ನಡೆಯಲಿದ್ದು, ನಂತರ 660 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ (PSI Recruitment) ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಮರು ಪರೀಕ್ಷೆಯನ್ನು(ಜ.23ರಂದು) 54 ಸಾವಿರ ಅಭ್ಯರ್ಥಿಗಳು ಬರೆಯಬೇಕಿತ್ತು. ಕೆಲವರು ಗೈರಾಗಿದ್ದು, ಶೇ.65ರಿಂದ 70ರಷ್ಟು ಮಂದಿ ಪರೀಕ್ಷೆ ಬರೆದಿದ್ದಾರೆ. ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಇದರ ಬಳಿಕ 403 ಪಿಎಸ್‌ಐ ಹುದ್ದೆಗಳಿಗೆ ಪರೀಕ್ಷೆ ಮಾಡಬೇಕು. ಇದಕ್ಕೆ ಈಗಾಗಲೇ ದೈಹಿಕ ಪರೀಕ್ಷೆ ನಡೆದಿದೆ. ತದನಂತರ 660 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.