ಧಾರವಾಡ: ಕರ ಸೇವಕರ ಮೇಲಿನ ಕೇಸ್ ರೀ ಓಪನ್ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ. ಅಲ್ಲದೇ ರಾಮ ಭಕ್ತರನ್ನು ಬಂಧಿಸುವ ಹುನ್ನಾರವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರ್ ಅಶೋಕ್(R Ashoka) ಆರೋಪಿಸಿದ್ದಾರೆ.
ಕರಸೇವಕ ಶ್ರೀಕಾಂತ್ ಪೂಜಾರಿಯನ್ನು(Srikanth Pujari) ಬಂಧನ ವಿರೋಧಿಸಿ ಬಿಜೆಪಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ.
ಹುಬ್ಬಳ್ಳಿಯ(Hubballi) ಶಹರ ಠಾಣೆ ಎದುರು ಪ್ರತಿಪಕ್ಷ ನಾಯಕ ಆರ್.ಅಶೋಕ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಸುಮಾರು 56,000 ಪೆಂಡಿಂಗ್ ಕೇಸ್ಗಳು ಇವೆ. ಆದರೆ, ಅವೆಲ್ಲವನ್ನು ಬಿಟ್ಟು ಹುಬ್ಬಳ್ಳಿ ಕಡೆ ಬಂದಿರೋದು ಯಾಕೆ? ಕರಸೇವಕರನ್ನು ಹುಡುಕಿ ಬಂಧನ ಮಾಡಿದ್ದು ನ್ಯಾಯವಾ? ರಾಮನ ಮೇಲೆ ಕಾಂಗ್ರೆಸ್ಗೆ ಕೋಪ ಏಕೆ ಎಂದು ಅಶೋಕ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲೆ ಚೀಟಿಂಗ್ ಕೇಸ್ ಇಲ್ವಾ ಎಂದು ಪ್ರಶ್ನಿಸಿದ ಅವರು, ಹಿಂದೂ ಕಾರ್ಯಕರ್ತರ ಮೇಲೆ ಮಾತ್ರ ಏಕೆ ಹುಡುಕಿ ಕೇಸ್ ಹಾಕುತ್ತಿದ್ದಾರೆ. ಕೂಡಲೇ ಜೈಲಿನಿಂದ ಶ್ರೀಕಾಂತ ಪೂಜಾರಿ ಬಿಡುಗಡೆ ಮಾಡಬೇಕು. ನನ್ನ ಮೇಲೂ ಕೇಸ್ ಇದೆ ಬಂಧಿಸಿ ನೋಡೋಣ ಎಂದು ಸರ್ಕಾರಕ್ಕೆ ಸವಾಲೆಸೆದರು. ಇದು ಕಾಂಗ್ರೆಸ್ ದ್ವೇಷ ರಾಜಕಾರಣಕ್ಕೆ ಸಾಕ್ಷಿಯಾಗಿದ್ದು ರಾಮಭಕ್ತರನ್ನು ಬೆದರಿಸುವ ಕಾರ್ಯ ನಡೆಯುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಸರ್ಕಾರ ಈ ರೀತಿ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.