ಬೆಂಗಳೂರು: ವಿಜಯಪುರದ (Vijayapur) ದ್ಯಾಬೇರಿ ಗ್ರಾಮದ ವಾಗ್ದೇವಿ ದೇವಿಯ ದೇವಸ್ಥಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಭೇಟಿ ನೀಡಿದ್ದರು. ಈ ವೇಳೆ ಗರ್ಭಗುಡಿಯ ಒಳಗಡೆ ಹೋಗದೆ, ಹೊರಗಿನಿಂದಲೇ ನಮಸ್ಕರಿಸಿದ್ದರು. ಇದೀಗ ಈ ಬಗ್ಗೆ ರಾಜ್ಯ ಬಿಜೆಪಿ (BJP) ಟೀಕೆ ಮಾಡಿದೆ.
ಈ ಬಗ್ಗೆ ಎಕ್ಸ್ ನಲ್ಲಿ (X) ಬರೆದುಕೊಂಡಿರುವ ಬಿಜೆಪಿ, “ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ನೀಡಿ, ರಾಮಮಂದಿರಕ್ಕೆ (Ram Mandir) ಒಂದು ರೂ. ಸಹ ದೇಣಿಗೆ ನೀಡದ ಚುನಾವಣಾ ಹಿಂದೂ ಸಿಎಂ ಸಿದ್ದರಾಮಯ್ಯರವರ ಅಸಲಿ ಮುಖ ಇದು. ವಿಜಯಪುರದ ದ್ಯಾಬೇರಿ ಗ್ರಾಮದ ವಾಗ್ದೇವಿ ದೇವಿಯ ದರ್ಶನವನ್ನು ಕಾಟಾಚಾರಕ್ಕೆ ಮಾಡಿದ ಹಿಂದೂ ವಿರೋಧಿ ಸಿದ್ದರಾಮಯ್ಯರವರು ಪ್ರಭು ಶ್ರೀರಾಮರ ಅಪರಾವತಾರವಂತೆ.
ಸಿಎಂ ಸಿದ್ದರಾಮಯ್ಯ ಅವರೇ, ಮಸೀದಿ, ದರ್ಗಾಗಳಿಗೆ ಹೋಗಿ ಅವರು ನೀಡಿದ್ದೆಲ್ಲವನ್ನೂ ಮೈ ಮೇಲೆ ಹಾಕಿಕೊಂಡು ಫೋಸು ಕೊಡುವ ನಿಮಗೆ, ದೇವಿಯ ಬಳಿ ನಾಡಿನ ಒಳಿತಿಗಾಗಿ ಭಕ್ತಿಯಿಂದ ಕೈ ಮುಗಿಯುವಷ್ಟು ಸಮಯವಿಲ್ಲ. ಹಿಂದೂ ಧರ್ಮ, ಹಿಂದೂ ದೈವ ಹಾಗೂ ಹಿಂದೂಗಳನ್ನು ಕಂಡರೆ ಈ ಪರಿ ಅಸಡ್ಡೆ ಏಕೆ..?” ಎಂದು ಪ್ರಶ್ನೆ ಮಾಡಿದೆ.
ಅಲ್ಲದೇ ಮತ್ತೊಂದು ಟ್ವಿಟ್ ನಲ್ಲಿ, “ಪ್ರಭು ಶ್ರೀ ರಾಮ ವಿರೋಧಿ ಕಾಂಗ್ರೆಸ್ ಸರ್ಕಾರದ ತುಘಲಕ್ ಧೋರಣೆಗಳು: ಪ್ರಭು ಶ್ರೀರಾಮನ ವಿರೋಧ, ರಾಮ ಮಂದಿರಕ್ಕೂ ವಿರೋಧ, ರಾಮ ಭಕ್ತರ ಬಂಧನ, ರಾಮನ ಅಸ್ತಿತ್ವದ ಬಗ್ಗೆ ಪ್ರಶ್ನೆ, ದತ್ತ ಮಾಲಾಧಾರಿಗಳ ಮೇಲೆ ದೌರ್ಜನ್ಯ, ಹಿಂದೂ ಕಾರ್ಯಕರ್ತರ ಗಡಿಪಾರು.
#RamaVirodhiCongress ಸರ್ಕಾರದ ವಿರುದ್ಧ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ” ನಡೆಸಲಾಗುವುದು ಎಂದು ಬರೆದುಕೊಂಡಿದೆ.
1991ರಲ್ಲಿ ಹುಬ್ಬಳ್ಳಿಯ (Hubli) ದುರ್ಗದ ಬೈಲ್ ನಲ್ಲಿ ಶ್ರೀ ರಾಮ ಮಂದಿರಕ್ಕಾಗಿ (Ram Mandir) ನಡೆದ ಹೋರಾಟದಲ್ಲಿ, ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರ ವಿರುದ್ಧ ಎಫ್ ಐ ಆರ್ (FIR) ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಇದನ್ನು ವಿರೋಧಿಸಿ ಇಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆಯನ್ನು ಬಿಜೆಪಿ ಹಮ್ಮಿಕೊಂಡಿದೆ.