ಬೆಂಗಳೂರು: ಸೇವೆ ಕಾಯಂಗೆ ಆಗ್ರಹಿಸಿ ತರಗತಿ ಬಹಿಷ್ಕರಿಸಿ ಅತಿಥಿ ಉಪನ್ಯಾಸಕರು (Guest lecturers) ಆರಂಭಿಸಿರುವ ಪಾದಯಾತ್ರೆ ಮುಂದುವರಿದಿದ್ದು, ಇದೀಗ ಬೆಂಗಳೂರಿಗೆ (bengaluru) ಪಾದಯಾತ್ರೆ ಬಂದು ತಲುಪಿದೆ.
ಅತಿಥಿ ಉಪನ್ಯಾಸಕ ಸೇವೆಯನ್ನು ಕಾಯಂಗೊಳಿಸುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ತುಮಕೂರಿನ (Tumkur) ಸಿದ್ದಗಂಗಾ ಮಠದಿಂದ (Siddaganga Mutt) ಬೆಂಗಳೂರಿಗೆ ಪಾದಯಾತ್ರೆ ಹೊರಟಿದ್ದು, ಇದೀಗ ಬೆಂಗಳೂರಿಗೆ ಪಾದಯಾತ್ರೆ ಬಂದು ತಲುಪಿದೆ.
ಈ ನಡುವೆ ಕೊಪ್ಪಳದಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ (CM Siddaramaiah), ಪಾದಯಾತ್ರೆ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಜತೆ ಮಾತನಾಡಿದ್ದೇವೆ. ಅವರು ಖಾಯಂ ಮಾಡಿ ಎನ್ನುತ್ತಿದ್ದಾರೆ. ಖಾಯಂ ಮಾಡುವುದು ಕಷ್ಟದ ಕೆಲಸ. ಕಾನೂನು ಮೀರಿ ಮಾಡಿದರೆ ಭಾರೀ ಕಷ್ಟ ಆಗಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ (Dr. M.C. Sudhakar), ಅತಿಥಿ ಉಪನ್ಯಾಸಕರ ಖಾಯಂಗೊಳಿಸಲು ಕಾನೂನು ತೊಡಕು ಇದೆ. ಯಾವುದೇ ರಾಜ್ಯದಲ್ಲೂ ಖಾಯಂ ಮಾಡಿಲ್ಲ ಎಂದು ಹೇಳಿದ್ದಾರೆ. ಮುಷ್ಕರನಿರತ ಅತಿಥಿ ಉಪನ್ಯಾಸಕರ ಸೇವೆ ಖಾಯಂ ಬೇಡಿಕೆಗೆ ಸರಕಾರ ಒಪ್ಪಿಲ್ಲ. ಆದರೆ, ಗರಿಷ್ಠ 5,000 ರೂ. ವೇತನ ಹೆಚ್ಚಿಸಲು ಸಮ್ಮತಿಸಿದೆ. ಅವರ ಸೇವಾವಧಿ ಆಧಾರದ ಮೇಲೆ ವೇತನ ಪರಿಷ್ಕರಣೆಯಾಗಲಿದೆ. ಇದರ ಜತೆಗೆ ಅತಿಥಿ ಉಪನ್ಯಾಸಕರಿಗೆ ವಾರ್ಷಿಕ ಐದು ಲಕ್ಷ ರೂ. ಆರೋಗ್ಯ ವಿಮೆ, 10 ವರ್ಷ ಸೇವೆ ಪೂರೈಸಿದ 60 ವರ್ಷ ಮೀರಿದ ಅತಿಥಿ ಉಪನ್ಯಾಸಕರಿಗೆ ಐದು ಲಕ್ಷ ರೂ. ಇಡಗಂಟು ನೀಡಲು ಸರಕಾರ ನಿರ್ಧರಿಸಿದೆ ಎಂದು ಸಚಿವರು ಮಾಹಿತಿ ನೀಡಿದರು.
ಜ.4ರಂದು ಬೆಂಗಳೂರಿನ ಫ್ರಿಡಮ್ ಪಾರ್ಕ್ ನಲ್ಲಿ (Freedom Park) ರಾಜ್ಯದ ಎಲ್ಲಾ 9ಸಾವಿರ ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತುಮಕೂರು ಜಿಲ್ಲಾಧ್ಯಕ್ಷ ಡಾ. ಧರ್ಮವೀರ (Dr. Dharmaveer) ಮಾಹಿತಿ ನೀಡಿದ್ದಾರೆ.