ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಒಂದು ಸುಳ್ಳನ್ನು ನೂರು ಬಾರಿ ಹೇಳಿ ಅದನ್ನು ಸತ್ಯ ಮಾಡುವ ಕಲೆ ತಮಗೆ ಚೆನ್ನಾಗಿ ಕರಗತವಾಗಿದೆ. ಎಷ್ಟಾದರೂ ಸುಳ್ಳೇ ಕಾಂಗ್ರೆಸ್ ಪಕ್ಷದ ಮನೆ ದೇವರಲ್ಲವೇ? ಎಂದು ಪ್ರಶ್ನಿಸಿದ್ದಾರೆ. 15ನೇ ಹಣಕಾಸು ಆಯೋಗ ತನ್ನ 2020-21ರ ಮಧ್ಯಂತರ ವರದಿಯಲ್ಲಿ ಕರ್ನಾಟಕಕ್ಕೆ 5495 ಕೋಟಿ ರೂ.
ಶಿಫಾರಸು ಮಾಡಿದ್ದುದು ನಿಜ. ಆದರೆ 2021-22 ರಿಂದ 2025-26ರವರೆಗಿನ ತನ್ನ ಅಂತಿಮ ವರದಿಯಲ್ಲಿ ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯಕ್ಕೆ ವಿಶೇಷ ಅನುದಾನವನ್ನು ಶಿಫಾರಸು ಮಾಡಿಲ್ಲ. ಇದು ಸತ್ಯಾಂಶ. ತಾವು ಹೇಳಿರುವುದು ಅರ್ಧ ಸತ್ಯವೆಂದು ತಮಗೂ ಗೊತ್ತು.
ಅಲ್ಲವೇ? ಎಂದಿದ್ದಾರೆ. ಕೋವಿಡ್-19 ಸಾಂಕ್ರಾಮಿಕದ ನಂತರದ ಪರಿಸ್ಥಿತಿಯಲ್ಲಿ ಆರ್ಥಿಕ ಪುನಶ್ಚೇತನಕ್ಕಾಗಿ 2020-21ನೇ ಹಣಕಾಸು ವರ್ಷದಿಂದ ಈವರೆಗೆ ಕರ್ನಾಟಕಕ್ಕೆ 6561.91 ಕೋಟಿ ರೂ. ಮೊತ್ತವನ್ನು 50 ವರ್ಷಗಳ ಬಡ್ಡಿ ರಹಿತ ಸಾಲವಾಗಿ ಕರ್ನಾಟಕಕ್ಕೆ ನೀಡಲಾಗಿದೆ.