ಹುಬ್ಬಳ್ಳಿ: ಹು-ಧಾ ಸೆಂಟ್ರಲ್ ವಿಧಾನಸಭಾ ಮತ ಕ್ಷೇತ್ರದಲ್ಲಿ ಟೆಂಡರ್ ಹಂತದಲ್ಲಿರುವ ಕೋಟ್ಯಂತರ ರೂಪಾಯಿ ರಸ್ತೆ, ಸೇತುವೆ ಕಾಮಗಾರಿಯನ್ನು ಹಿಂದಿನ ಶಾಸಕರು ತಮ್ಮ ಪ್ರಭಾವ ಬಳಸಿ, ಕಾಮಗಾರಿಗಳನ್ನು ಸ್ಥಗಿತಗೊಳಿಸಿದ್ದು, ಅಭಿವೃದ್ಧಿ ಕಾಮಗಾರಿಯಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ವಿ.ಪ ಸದಸ್ಯ ಜಗದೀಶ್ ಶೆಟ್ಟರ್ ವಿರುದ್ಧ ಶಾಸಕ ಮಹೇಶ ಟೆಂಗಿನಕಾಯಿ ಗಂಭೀರ ಆರೋಪ ಮಾಡಿದರು.
30 ಕೋಟಿ ರೂ ವೆಚ್ಚದ ಕಾಮಗಾರಿ ಸ್ಥಗಿತ: ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಹು-ಧಾ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರದಲ್ಲಿ 43 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಸಲು ಟೆಂಡರ್ ಪ್ರಕ್ರಿಯೆ ನಡೆಸಲು ಅನುಮೋದನೆ ದೊರೆತಿತ್ತು. ಇದೀಗ ಸರ್ಕಾರ 30 ಕೋಟಿ ವೆಚ್ಚದ ಕಾಮಗಾರಿಯನ್ನು ಸ್ಥಗಿತಗೊಳಿಸಲು ಪತ್ರ ಕಳಿಸಿದೆ. ಇದರ ಹಿಂದೆ ಮಾಜಿ ಶಾಸಕರ ಕೈವಾಡ ಸ್ಪಷ್ಟವಾಗಿದೆ. ಮುಂದಿನ ದಿನಗಳಲ್ಲಿ ದಾಖಲೆ ಸಮೇತ ಮಾಧ್ಯಮಕ್ಕೆ ಮಾಹಿತಿ ನೀಡುವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಭಿವೃದ್ಧಿಯಲ್ಲಿ ರಾಜಕೀಯ ಸರಿಯಲ್ಲ: ಅಭಿವೃದ್ಧಿ ಕಾಮಗಾರಿಗಳಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಇದು ನಗರದ ಅಭಿವೃದ್ಧಿಗೆ ಮಾರಕವಾಗಲಿದೆ. ಈ ಬಗ್ಗೆ ಬರುವ ದಿನಗಳಲ್ಲಿ ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡುವೆ. ಇದಲ್ಲದೇ ಹೋರಾಟ ಮಾಡಲಾಗುವುದು ಕಾದು ನೋಡಿ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಶಾಸಕನಾಗಿ ಹು-ಧಾ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರದ ಜೊತೆಗೆ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಸುಮಾರು 25 ಪ್ರಶ್ನೆಗಳನ್ನು 31 ಇಲಾಖೆಗೆ ಕೇಳಿದ್ದೆ, ಅದರಲ್ಲಿ ಸರ್ಕಾರ 3 ಪ್ರಶ್ನೆಗಳಿಗೆ ಲಿಖಿತವಾಗಿ ಉತ್ತರಿಸಲು ತಿರಸ್ಕರಿಸಿದೆ ಎಂದು ವಿವರಿಸಿದರು.
ಸಂಗೀತ ವಿಶ್ವವಿದ್ಯಾಲಯ ಉಳಿವಿಗಾಗಿ ಧ್ವನಿ ಎತ್ತಿದ್ದೇನೆ: ನಗರದಲ್ಲಿನ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯ ಉಳಿವಿಗಾಗಿ ಧ್ವನಿ ಎತ್ತಿದ್ದಕ್ಕೆ ಸರ್ಕಾರ ಸ್ಪಂದಿಸಿದ್ದು, ಮೈಸೂರಿಗೆ ಸ್ಥಳಾಂತರ ಮಾಡುವುದನ್ನು ಕೈಬಿಟ್ಟಿದೆ. ಸದನದಲ್ಲಿ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಆದರೆ ಅನುದಾನ ವಿಷಯದಲ್ಲಿ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುವ ಕೆಲಸ ಮಾಡಿದರು. ಈ ಬಗ್ಗೆ ಕೂಡಾ ಸಚಿವರಿಗೆ ಸ್ಪಷ್ಟ ಅಂಕಿ ಅಂಶಗಳನ್ನು ನೀಡಲಾಗಿದೆ.