ದುಬೈ, ನ.10- ಮರಳುಗಾಡಿನ ದುಬೈ, ಶಾರ್ಜಾ, ಅಬುದಾಬಿಗಳಲ್ಲಿ 52 ದಿನಗಳ ಕಾಲ 8 ತಂಡಗಳು ನಡೆಸಿದ ಸಮರದ ಅಂತಿಮ ಕಾಳಗಕ್ಕೆ ಕ್ಷಣಗಣನೆ ಶುರುವಾಗಿದ್ದು ಐಪಿಎಲ್ ಮುಕುಟವನ್ನು ಗೆದ್ದು ಹುಣ್ಣಿಮೆಯ ನಗೆ ಚೆಲ್ಲಲು ರೋಹಿತ್ ಶರ್ಮಾ ಸಾರಥ್ಯದ ಮುಂಬೈ ಇಂಡಿಯನ್ಸ್ ಹಾಗೂ ಶ್ರೇಯಾಸ್ ಅಯ್ಯರ್ ನಾಯ ಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿದೆ.
#ಇತಿಹಾಸ ನಿರ್ಮಿಸಲು ರೆಡಿ:
ಇಂದು ನಡೆಯುವ ಐಪಿಎಲ್‍ನ ಅಂತಿಮ ಪಂದ್ಯದಲ್ಲಿ ಇತಿಹಾಸ ನಿರ್ಮಿಸಲು ಎರಡು ತಂಡಗಳ ನಾಯಕರು ರೆಡಿಯಾಗಿದ್ದಾರೆ. 13 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಚೊಚ್ಚಲ ಬಾರಿಗೆ ಫೈನಲ್ ತಲುಪಿರುವ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ಮುಕುಟ ಗೆದ್ದು ಇತಿಹಾಸ ನಿರ್ಮಿಸಲು ಸಜ್ಜಾಗಿದ್ದರೆ, ಮತ್ತೊಂದೆಡೆ 5ನೆ ಬಾರಿ ಕಪ್ ಗೆದ್ದ ನಾಯಕ ಎಂಬ ಕೀರ್ತಿಗೆ ಭಾಜನರಾಗಲು ರೋಹಿತ್‍ಶರ್ಮಾ ಸಜ್ಜಾಗಿದ್ದಾರೆ.
#ಬೂಮ್ರಾ ವರ್ಸಸ್ ರಬಡಾ:
ಇಂದು ನಡೆಯುತ್ತಿರುವ ಐಪಿಎಲ್ ಫೈನಲ್ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್‍ನ ಕಾಳಗ ಎನ್ನುವುದಕ್ಕಿಂತ ವೇಗಿಗಳಾದ ಕಗಸೊ ರಬಡಾ ಹಾಗೂ ಜಸ್‍ಪ್ರೀತ್ ಬೂಮ್ರಾರ ಸಮರ ಎಂದೇ ಬಿಂಬಿತವಾಗಿದೆ. ಪರ್ಪಲ್ ಕ್ಯಾಪ್ ರೇಸ್‍ನಲ್ಲಿರುವ ಬೂಮ್ರಾ (27 ವಿಕೆಟ್) ಹಾಗೂ ರಬಡಾ (29 ವಿಕೆಟ್) ಇಂದಿನ ಪಂದ್ಯದಲ್ಲೂ ತಮ್ಮ ತಂಡಗಳ ಗೆಲುವಿಗೆ ಶ್ರಮ ಹಾಕಲಿದ್ದಾರೆ.
#ಬೂಮ್ರಾ- ಬೌಲ್ಟ್ ಜುಗಲ್‍ಬಂದಿ:
ಐಪಿಎಲ್ 13ರಲ್ಲಿ ಮುಂಬೈ ಇಂಡಿಯನ್ಸ್‍ನ ವೇಗಿಗಳಾದ ಬೂಮ್ರಾ ಹಾಗೂ ಬೌಲ್ಟ್‍ರ ಜುಗಲ್‍ಬಂದಿ ಅದ್ಭುತವಾಗಿದ್ದು ಕ್ಯಾಪಿಟಲ್ಸ್ ವಿರುದ್ಧ ನಡೆದ 3 ಪಂದ್ಯಗಳಲ್ಲಿ ಈ ಜೋಡಿಯು 11 ವಿಕೆಟ್‍ಗಳನ್ನು ಕಬಳಿಸಿದ್ದು ಫೈನಲ್‍ನಲ್ಲೂ ತಮ್ಮ ಮೋಡಿ ಪ್ರದರ್ಶಿಸಲು ಮುಂದಾಗಿದೆ.
#ಮಿಂಚುವರೇ ಸ್ಟೋನಿಸ್:
ಕ್ವಾಲಿಫೈಯರ್ 2 ಪಂದ್ಯದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ್ದ ಸ್ಟೋನಿಸ್ ಹಾಗೂ ಧವನ್ ಜೋಡಿ ಫೈನಲ್‍ನಲ್ಲೂ ಮಿಂಚಿ ಭಾರೀ ರನ್ ಕಲೆ ಹಾಕುವತ್ತ ಚಿತ್ತ ಹರಿಸಿದ್ದಾರೆ. ಇವರಿಗೆ ರಹಾನೆ, ಪಂತ್, ಅಯ್ಯರ್, ಹಿಟ್‍ಮೇರ್ ಸಾಥ್ ನೀಡಿದರೆ ಮುಂಬೈ ಇಂಡಿಯನ್ಸ್ ಬೌಲರ್‍ಗಳನ್ನು ದಿಟ್ಟವಾಗಿ ಎದುರಿಸಿ ಚೊಚ್ಚಲ ಐಪಿಎಲ್ ಚಾಂಪಿಯನ್ಸ್ ಆಗಬಹುದು.
Laxmi News 24×7