ರಾಯಚೂರು: ಪತ್ನಿಯ ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದ ಪತಿಯನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ.ತಿಳಿಸಿದರು.
ಸೋನಿ ಕೊಲೆಯಾದ ಮಹಿಳೆ. ಅವಿನಾಶ್ ಹಂತಕ.
ಎಸ್ಪಿ ನಿಖಿಲ್.ಬಿ. ಮಾತನಾಡಿ, “ರಾಯಚೂರಿನ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿ.13ರಂದು ಕೊಲೆ ನಡೆದಿತ್ತು. ಅವಿನಾಶ್ ಎಂಬಾತ ತನ್ನ ಪತ್ನಿ ಸೋನಿ ಅವರನ್ನು ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ. ಇವರು ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಒಂದು ತಿಂಗಳ ಮಗು ಇದೆ. ಮಗು ಜನಿಸಿದ ಬಳಿಕ ಸೋನಿ ನೋವಿನಿಂದ ಬಳಲುತ್ತಿದ್ದರು. ವೈದ್ಯಕೀಯ ವೆಚ್ಚ ಹೆಚ್ಚಾಗಿದ್ದರಿಂದ ಪತ್ನಿಯ ಮೇಲೆ ಕೊಪಗೊಂಡು ಆಕೆಯನ್ನು ಹತ್ಯೆ ಮಾಡಿದ್ದಾನೆ. ಆರೋಪಿ ಮೊದಲು, ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲು ಯತ್ನಿಸಿದ್ದ. ನಂತರ ತನಿಖೆಯಲ್ಲಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ” ಎಂದರು.
“ಯಾವಾಗಲೂ ಅಳುತ್ತಿದ್ದುದರಿಂದ ಮಗುವನ್ನು ನಿನಗೆ ನೋಡಿಕೊಳ್ಳಲು ಬರುವುದಿಲ್ಲ ಎಂದು ತನ್ನ ಪತ್ನಿಯೊಂದಿಗೆ ಆರೋಪಿ ಜಗಳವಾಡುತ್ತಿದ್ದ. ಮೂಲತಃ ಉತ್ತರ ಪ್ರದೇಶದ ಹತ್ರಾಸ್ನವರಾಗಿದ್ದು, ಪ್ರೀತಿಸಿ ಮದುವೆಯಾಗಿದ್ದರು. ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಮಗುವನ್ನು ಸೌಹಾರ್ದ ಕೇಂದ್ರದಲ್ಲಿ ಇರಿಸಲಾಗಿದೆ” ಎಂದು ಅವರು ತಿಳಿಸಿದರು.