ಬೆಂಗಳೂರು : ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಆಶ್ರಯ ಕಲ್ಪಿಸಿದ್ದ ಆರೋಪಕ್ಕೆ ಗುರಿಯಾಗಿರುವ ಎನ್.
ಮೋಹನ್ ನಾಯಕ್ ಅಲಿಯಾಸ್ ಸಂಪಾಜೆಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇವರು ಇಡೀ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಮೊದಲ ಆರೋಪಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯ ಎನ್ ಮೋಹನ್ ನಾಯಕ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿದೆ. ಅಲ್ಲದೇ, ಒಂದು ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್, ಇಬ್ಬರು ಭದ್ರತಾ ಖಾತರಿ ಒದಗಿಸಬೇಕು. ವಿಚಾರಣಾಧೀನ ನ್ಯಾಯಾಲಯ ಅನುಮತಿಸದ ಹೊರತು ಪ್ರತಿ ವಿಚಾರಣೆಗೂ ಆರೋಪಿ ನ್ಯಾಯಾಲಯದ ಮುಂದೆ ಹಾಜರಾಗಬೇಕು ಮತ್ತು ನ್ಯಾಯಾಲಯದ ವ್ಯಾಪ್ತಿಯಿಂದ ಹೊರಹೋಗುವಂತಿಲ್ಲ. ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ಇಂಥದ್ದೇ ಪ್ರಕರಣದಲ್ಲಿ ಮತ್ತೆ ಭಾಗಿಯಾಗುವಂತಿಲ್ಲ ಎಂಬ ಷರತ್ತುಗಳನ್ನು ನ್ಯಾಯಪೀಠ ವಿಧಿಸಿದೆ.
ಪ್ರಕರಣದಲ್ಲಿ ಒಟ್ಟಾರೆ 527 ಸಾಕ್ಷಿಗಳಿದ್ದು, ಇದುವರೆಗೆ 90 ಸಾಕ್ಷಿಗಳ ವಿಚಾರಣೆಯಾಗಿದೆ. 2021ರ ಅಕ್ಟೋಬರ್ 30 ರಂದು ಆರೋಪಿಗಳ ವಿರುದ್ಧ ಆರೋಪ ನಿಗದಿಯಾಗಿದೆ. ಕಳೆದ ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ 90 ಸಾಕ್ಷಿಗಳನ್ನು ಮಾತ್ರ ವಿಚಾರಣೆ ನಡೆಸಲಾಗಿದೆ. ಇನ್ನೂ 400ಕ್ಕೂ ಹೆಚ್ಚು ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಬೇಕಿದೆ. ಎರಡು ವರ್ಷವಾದರೂ 90 ಸಾಕ್ಷಿಗಳ ಮಾತ್ರ ವಿಚಾರಣೆಯಾಗಿರುವುದರಿಂದ ಪ್ರಕರಣದ ವಿಚಾರಣೆ ಶೀಘ್ರದಲ್ಲಿ ಮುಗಿಯುವ ಸಾಧ್ಯತೆ ಇಲ್ಲ ಎಂದು ಪೀಠ ತಿಳಿಸಿದೆ.
ಅಲ್ಲದೇ, ಇತರ ಆರೋಪಿಗಳ ಜೊತೆ ಸೇರಿ ಗೌರಿ ಕೊಲೆ ಮಾಡಿರುವ ಆರೋಪ ಎದುರಿಸುತ್ತಿರುವ ಮೋಹನ್ ನಾಯಕ್ 2018ರ ಜುಲೈ 18 ರಿಂದ ನ್ಯಾಯಾಂಗ ವಶದಲ್ಲಿದ್ದಾರೆ. ಪ್ರಕರಣದ ಯಾವೊಬ್ಬ ಸಾಕ್ಷಿಯು ಆರೋಪಿಗಳ ಸಭೆಯಲ್ಲಿ ಮೋಹನ್ ನಾಯಕ್ ಭಾಗಿಯಾಗಿರಲಿಲ್ಲ. ಬಹುತೇಕ ಸಾಕ್ಷಿಗಳು ಬೆಂಗಳೂರಿನ ಕುಂಬಳಗೋಡಿನಲ್ಲಿ ಮೋಹನ್ ನಾಯಕ್ ಮನೆ ಬಾಡಿಗೆ ಪಡೆದಿದ್ದರು ಎಂದಷ್ಟೇ ಹೇಳಿದ್ದಾರೆ ಅಂತ ಪೀಠ ತಿಳಿಸಿದೆ.