ಗಂಗಾವತಿ: ಕಳೆದ ವಿಧಾನಸಭೆಯ ಅಧಿವೇಶನದ ಕಲಾಪದ ಒಂದು ದಿನವೂ ಗೈರಾಗದೇ ಗಮನ ಸೆಳೆದಿದ್ದ ಗಂಗಾವತಿಯ ಶಾಸಕ ಜಿ.
ಜನಾರ್ದನ ರೆಡ್ಡಿಗೆ ಸ್ಪೀಕರ್ ಯು.ಟಿ. ಖಾದರ್ ಉಡುಗೊರೆ ನೀಡುವ ಮೂಲಕ ಅಭಿನಂದಿಸಿದ್ದಾರೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದ ಬಿಡುವಿನ ಸಂದರ್ಭದಲ್ಲಿ ತಮ್ಮ ಕೊಠಡಿಗೆ ಕರೆಯಿಸಿಕೊಂಡ ಸ್ಪೀಕರ್ ಪುಟ್ಟ ಉಡುಗೊರೆ ನೀಡಿ ಅಭಿನಂದನೆ ಸಲ್ಲಿಸಿದರು.
ವಿಧಾನಸೌಧದಲ್ಲಿ ನಡೆದ ಕಳೆದ ಅಧಿವೇಶನದ 14 ದಿನಗಳ ಎಲ್ಲ ಕಾರ್ಯಕಲಾಪದಲ್ಲಿ ಸಮಯಕ್ಕೆ ಸರಿಯಾಗಿ ಹಾಜರಾಗಿ ದಿನದ ಕಲಾಪಗಳು ಮುಗಿಯುವವರೆಗೂ ಇದ್ದು ರೆಡ್ಡಿ ಗಮನ ಸೆಳೆದಿದ್ದರು. ಈ ಹಿನ್ನೆಲೆ ಅಭಿನಂದಿಸಿದ ಖಾದರ್ ಚುನಾಯಿತ ಪ್ರತಿನಿಧಿಗಳಿಗೆ ಕೇವಲ ತಮ್ಮ ಕ್ಷೇತ್ರದ ಬಗ್ಗೆ ಮಾತ್ರವಲ್ಲ ಇಡೀ ರಾಜ್ಯದಲ್ಲಿ ನಡೆಯುವ ಕಾರ್ಯಚಟುವಟಿಕೆಗಳ ಬಗ್ಗೆಯೂ ಗಮನ ಇರಬೇಕು. ಈ ನಿಟ್ಟಿನಲ್ಲಿ ಕಲಾಪದಲ್ಲಿನ ಚಟುವಟಿಕೆಗಳಲ್ಲಿ ಭಾಗಿಯಾಗುವ ನಿಮ್ಮ ಹಾಜರಾತಿಯ ನಡಾವಳಿಕೆ ಇತರರಿಗೆ ಮಾದರಿಯಾಗಿದೆ ಎಂದು ಸ್ಪೀಕರ್ ಅಭಿನಂದಿಸಿದ್ದಾರೆ ಎಂದು ರೆಡ್ಡಿ ತಿಳಿಸಿದ್ದಾರೆ.