ಬೈಲಹೊಂಗಲ: ಐತಿಹಾಸಿಕವಾಗಿ ಕಿತ್ತೂರು ಸಂಸ್ಥಾನದೊಂದಿಗೆ ಬೆಸೆದುಕೊಂಡಿರುವ ತಾಲ್ಲೂಕಿನ ಅಮಟೂರು ಗ್ರಾಮದಲ್ಲಿ ಡಿ. 4ರಂದು ವೀರಕೇಸರಿ ಅಮಟೂರು ಬಾಳಪ್ಪನ ಉತ್ಸವ ಆಚರಣೆ ನಡೆಯಲಿದೆ. ಆದರೆ ಅಮಟೂರು ಬಾಳಪ್ಪನ ರಾಜ್ಯ ಮಟ್ಟದ ಸರ್ಕಾರಿ ಉತ್ಸವ ಆಚರಣೆ ಕನಸಾಗಿಯೇ ಉಳಿದಿರುವುದು ಗ್ರಾಮಸ್ಥರಲ್ಲಿ ನೋವು ಉಂಟು ಮಾಡಿದೆ.
ಗ್ರಾಮಸ್ಥರಲ್ಲಿ ನಿರಾಸೆ: ವೀರರಾಣಿ ಕಿತ್ತೂರು ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ ಉತ್ಸವದಂತೆ ಅಮಟೂರು ಬಾಳಪ್ಪನ ಉತ್ಸವ ಆಚರಣೆ ನಡೆಯುತ್ತದೆ. ಸಾಕಷ್ಟು ಅನುದಾನ ಬರುತ್ತದೆ. ಗ್ರಾಮದಲ್ಲಿ ಬಾಳಪ್ಪನ ಉತ್ಸವದ ಹೆಸರಿನಲ್ಲಿ ಸಾಂಸ್ಕೃತಿಕ ವೈಭವ, ಕಲಾ ಪ್ರತಿಭೆಗಳ ಅನಾವರಣ, ಕವಿಗೋಷ್ಠಿ, ಜಾನಪದ ಕಲಾ ತಂಡಗಳ ಮೆರಗು ನೋಡಬಹುದು ಎಂದು ವರ್ಷವಿಡಿ ಕಾಯ್ದು ಕುಳಿತ್ತಿದ್ದ ಗ್ರಾಮಸ್ಥರಲ್ಲಿ ನಿರಾಶೆಯ ಕಾರ್ಮೋಡ ಉಂಟಾಗಿದೆ.
ಟ್ರಸ್ಟ್ ವತಿಯಿಂದ ಉತ್ಸವ ಆಚರಣೆ: ಬಹು ವರ್ಷಗಳಿಂದ ವೀರಕೇಸರಿ ಅಮಟೂರು ಬಾಳಪ್ಪ ಟ್ರಸ್ಟ್ ಕಮಿಟಿ ವತಿಯಿಂದ ಅರ್ಥಪೂರ್ಣ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಸರ್ಕಾರದಿಂದ ಉತ್ಸವ ಆಚರಣೆ ಮಾಡುತ್ತೇವೆ ಎಂದು ಪೊಳ್ಳು ಭರವಸೆ ನೀಡುವ ಜನಪ್ರತಿನಿಧಿಗಳು, ಸರ್ಕಾರಗಳು ಇದುವರೆಗೆ ಗ್ರಾಮಸ್ಥರ ಕನಸು ಈಡೇರಿಸಿಲ್ಲ. ಉದ್ಯಾನದಲ್ಲಿ ಬಾಳಪ್ಪನ ಪ್ರತಿಮೆ ಪ್ರತಿಷ್ಠಾಪಿಸಿ ಕೈ ತೊಳೆದುಕೊಂಡಿದೆ ಅಷ್ಟೇ. ಆದರೆ ಬೃಹತ್ ಮಟ್ಟದ ಉತ್ಸವ ಆಚರಣೆ ನಡೆಯುತ್ತಿಲ್ಲ ಎಂಬ ಕೊರಗು ಕಾಡುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.