ಚಿಕ್ಕೋಡಿ : ಭಾರತ ದೇಶದ ಪರಂಪರೆಯಲ್ಲಿ ಮಠ – ಮಂದಿರಗಳು ತನ್ನದೇ ಆದಂತಹ ಪ್ರಮುಖ ಪಾತ್ರ ವಹಿಸಿವೆ.
ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಸಮಾಜಕ್ಕೆ ಕೊಡುಗೆಗಳನ್ನು ನೀಡಿ, ತನ್ನ ಸುತ್ತಮುತ್ತಲಿನ ವಾತಾವರಣದಲ್ಲಿ ಶಿಕ್ಷಣ, ಅನ್ನದಾಸೋಹ, ಸಂಸ್ಕೃತಿ, ಉತ್ತಮ ವಿಚಾರಧಾರೆ, ಭಕ್ತಿ ಭಂಡಾರಗಳನ್ನು ಸಾರುತ್ತ ಮಠಗಳ ಚಾರಿತ್ರ್ಯವನ್ನು ಇತಿಹಾಸ ಪುಟಗಳಲ್ಲಿ ಉಳಿಯುವಂತೆ ಹಲವು ಮಠಾಧೀಶರು ಕೂಡಾ ಕಾರ್ಯ ಮಾಡಿದ್ದಾರೆ. ಅದರಂತೆ ಇಲ್ಲಿನ ಗ್ರಾಮವೊಂದು ಸಂಸ್ಕೃತ ಭಾಷೆಯಿಂದಲೇ ಪ್ರಸಿದ್ಧಿ ಹೊಂದಿದೆ.
ಆಧುನಿಕ ಯುಗದಲ್ಲಿ ಹಲವು ಮಠಾಧೀಶರುಗಳ ನಡುವೆ ನಂದೇಶ್ವರ ಗ್ರಾಮದ ಪರಮ ಪೂಜ್ಯ ಸದ್ಗುರು ಶ್ರೀ ದುಂಡೇಶ್ವರ ಮಹಾಸ್ವಾಮಿಗಳವರು ಸಂಸ್ಕೃತ ಕ್ರಾಂತಿ ಮಾಡಿದ್ದು, ದೇಶವೇ ಒಂದು ಸಾರಿ ಈ ಗ್ರಾಮವನ್ನು ತಿರುಗಿ ನೋಡುವಂತೆ ಶ್ರಮಿಸಿದ್ದಾರೆ. ಗ್ರಾಮದ ಎಲ್ಲರಿಗೂ ಸಂಸ್ಕೃತ ಭಾಷೆ ಕಲಿಸಿ, ಪರಂಪರೆಯ ದೇವಲಿಪಿಯ ಉಳಿವಿಗೆ ಶ್ರೀಗಳು ಮುಂದಾಗಿದ್ದಾರೆ. ಈ ಗ್ರಾಮದ ಬಹುತೇಕರು ಸಂಸ್ಕೃತ ಭಾಷೆಯಲ್ಲಿ ಮಾತನಾಡುತ್ತ ಎಲ್ಲರ ಗಮನ ಸೆಳೆದಿದ್ದಾರೆ.