ಹುಬ್ಬಳ್ಳಿ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 28 ವರ್ಷಗಳ ಹಿಂದೆ ಜೈಲು ಸೇರಿ ನಂತರ ಜಾಮೀನಿನ ಮೇಲೆ ಹೊರಗೆ ಬಂದು ನ್ಯಾಯಾಲಯಕ್ಕೂ ಹಾಜರಾಗದೇ ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬೆಂಡಿಗೇರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ತಾರಿಹಾಳ ರೋಡ್ ನಿವಾಸಿ ಮಹ್ಮದ್ ಹನೀಫಸಾಬ್ ಹೊಸಮನಿ, (57) ಬಂಧಿತ ಆರೋಪಿ. ಈತ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ 1995ರಲ್ಲಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 28 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ನ್ಯಾಯಾಲಯ LPC ಪ್ರಕರಣ ಎಂದು ಪರಿಗಣಿಸಿ ಅವನ ಮೇಲೆ ವಾರೆಂಟ್ ಜಾರಿ ಮಾಡಿತ್ತು.
ಬೆಂಡಿಗೇರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಜಯಪಾಲ್ ಪಾಟೀಲ್ ಅವರ ನೇತೃತ್ವದ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯ ಪತ್ತೆಗಾಗಿ ಕೆಲಸ ಮಾಡಿದ ಪೊಲೀಸ್ ತಂಡಕ್ಕೆ ಹು-ಧಾ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಗೋವಾದಲ್ಲಿ ಓಡಾಡಿಕೊಂಡಿದ್ದ ಆರೋಪಿ: ನ್ಯಾಯಾಲಯಕ್ಕೆ ಹಾಜರಾಗದೇ ಆರೋಪಿ ಮಹ್ಮದ ಹನೀಫಸಾಬ ಹೊಸಮನಿ ಪೊಲೀಸರ ಕಣ್ತಪ್ಪಿಸಿ ಓಡಾಡಿಕೊಂಡಿದ್ದ. ತನ್ನ ಕುಟುಂಬವನ್ನು ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಬಿಟ್ಟು ತಾನು ಗೋವಾ ಸೇರಿಕೊಂಡಿದ್ದ. ಗೋವಾದಲ್ಲಿ ಹೋಟೆಲ್ ಹಾಗೂ ಸ್ಪಾಗಳಲ್ಲಿ ಕೆಲಸ ಮಾಡುತ್ತ ಪೊಲೀಸರ ಕಣ್ಣಿಗೆ ಮಣ್ಣೆರಚಿ ಓಡಾಡುತ್ತಿದ್ದ. ಆದ್ರೆ ಪೊಲೀಸರು ಈತನ ಬಗ್ಗೆ ಟೆಕ್ನಿಕಲ್ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಗೋವಾದಿಂದ ಈತನನ್ನು ತಾರಿಹಾಳಕ್ಕೆ ಕರೆಸಿಕೊಂಡು ಬಂಧಿಸಿರುವುದಾಗಿ ಪೊಲೀಸ್ ಇನ್ಸ್ಪೆಕ್ಟರ್ ಜಯಪಾಲ ಪಾಟೀಲ್ ಮಾಹಿತಿ ನೀಡಿದ್ದಾರೆ.
Laxmi News 24×7