ಬೆಂಗಳೂರು ರಾಮನಗರದಲ್ಲಿ ನಾಗೇಗೌಡರು ನಿರ್ಮಿಸಿರುವ ಜಾನಪದ ಲೋಕವು ರಾಜ್ಯ, ದೇಶಕ್ಕೆ ಮಾತ್ರವಲ್ಲದೆ, ವಿದೇಶಗಳಿಗೂ ಮಾದರಿಯಾಗಿದೆ. ಇತ್ತೀಚೆಗೆ ಸ್ಪೇನ್, ಇಂಗ್ಲೆಂಡಿನಿಂದಲೂ ಜಾನಪದ ತಜ್ಞರು ಭೇಟಿ ಮಾಹಿತಿ ಪಡೆದಿದ್ದಾರೆಂದು ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಶ್ಲಾಘನೆ ವ್ಯಕ್ತಪಡಿಸಿದರು.
ಸೋಮವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಜಾನಪದ ಪರಿಷತ್ತು ಆಯೋಜಿಸಿದ್ದ ನಾಡೋಜ ಎಚ್.ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿಂದೊಮ್ಮೆ ಜಾನಪದ ಲೋಕದ ಬಗ್ಗೆ ರಷ್ಯಾದಲ್ಲಿ ಉಲ್ಲೇಖಿಸಿದ್ದ ಸಂದರ್ಭದಲ್ಲಿ ಅಲ್ಲಿನ ಕಲಾವಿದರು ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವಿಸಿದ್ದರು. ್ರಾನ್ಸ್, ಜಪಾನ್ ಹೊರತುಪಡಿಸಿದರೆ, ಜಾನದಪ ಲೋಕದಷ್ಟು ದೊಡ್ಡ ವಸ್ತು ಸಂಗ್ರಹಾಲಯ ಮತ್ತೊಂದಿಲ್ಲ ಎಂದು ತಿಳಿಸಿದರು.
ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಶಿ. ರಾಮಚಂದ್ರೇಗೌಡ ಮಾತನಾಡಿ, ಜಾನಪದವು ವೈವಿಧ್ಯಮಯ ಸಂಸ್ಕೃತಿಯಾಗಿದ್ದು, ಆಧುನಿಕತೆಯು ಸಂಕುಚಿತ ಮನೋಭಾವವುಳ್ಳ ಸಂಸ್ಕೃತಿಯಾಗಿದೆ. ಸಮಾಜವನ್ನು ಬೇರ್ಪಡಿಸುತ್ತಿದೆ. ಆಧುನಿಕ ಸಮಾಜದಲ್ಲಿ ಗಂಡಸರು ಕ್ರೂರಿಗಳಾಗುತ್ತಿದ್ದರೆ, ಹೆಂಗಸರನ್ನು ಸರಕುಗಳಂತೆ ಕಾಣಲಾಗುತ್ತಿದೆ. ಈ ಹಿಂದೆ ಬ್ರಿಟೀಷರಿಗೆ ಸಲಾಂ ಹೊಡೆಯುತ್ತಿದ್ದರು. ಈಗ ಕಾರ್ಪೋರೇಟ್ ಸಂಸ್ಥೆಗಳಿಗೆ ಸಲಾಂ ಹೊಡೆಯುವಂತಹ ಸಂಸ್ಕೃತಿ ಬೆಳೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.