ಗುವಾಹಟಿ(ಅಸ್ಸಾಂ): ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಕ್ರಿಕೆಟ್ ಸರಣಿಯ 3ನೇ ಪಂದ್ಯ ಇಲ್ಲಿನ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಸಂಜೆ 7 ಗಂಟೆಗೆ ನಡೆಯಲಿದೆ. ಎರಡು ಪಂದ್ಯಗಳು ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಳ್ಳುವ ಗುರಿ ಹೊಂದಿರುವ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಬಳಗ ಆಸ್ಟ್ರೇಲಿಯಾ ವಿರುದ್ಧದ ಹೊಸ ಹೋರಾಟಕ್ಕೆ ಸಜ್ಜಾಗಿದೆ. ಈ ಪಂದ್ಯದ ಗೆಲುವಿನೊಂದಿಗೆ ಭಾರತ ಸರಣಿ ವಶಪಡಿಸಿಕೊಳ್ಳುತ್ತಾ ಅಥವಾ ಆಸ್ಟ್ರೇಲಿಯಾ ಪುಟಿದೇಳುತ್ತಾ ಎಂಬುದು ಕುತೂಹಲಕಾರಿಯಾಗಿದೆ. ಮೊದಲ ಪಂದ್ಯವನ್ನು 2 ವಿಕೆಟ್‌ಗಳಿಂದ ಗೆದ್ದ ಭಾರತ, ಎರಡನೇ ಟಿ20ಯಲ್ಲಿ 44 ರನ್‌ಗಳ ಜಯ ಸಾಧಿಸಿದೆ.
ಸರಣಿ ವಿಜಯದ ಮೇಲೆ ಕಣ್ಣಿಟ್ಟಿರುವ ಟೀಂ ಇಂಡಿಯಾ ಆತ್ಮವಿಶ್ವಾಸದಿಂದ ಕಣಕ್ಕಿಳಿಯುತ್ತಿದೆ. ಇನ್ನೊಮ್ಮೆ ಬ್ಯಾಟರ್‌ಗಳು ಸ್ಫೋಟಿಸಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ಬಿರುಸಿನ ಆಟವಾಡಿದ ಭಾರತ 36 ಬೌಂಡರಿ ಹಾಗೂ 24 ಸಿಕ್ಸರ್‌ಗಳನ್ನು ಬಾರಿಸಿತ್ತು. ಓಪನರ್ ಜೈಸ್ವಾಲ್ ಅವರ ಮಿಂಚಿನ ವೇಗ ಆತಿಥೇಯ ತಂಡಕ್ಕೆ ನಡುಕ ಹುಟ್ಟಿಸಿದೆ. ಎರಡನೇ ಟಿ20ಯಲ್ಲಿ ಧನಾಧನ್ ಇನ್ನಿಂಗ್ಸ್ ಆಡಿದ ಜೈಸ್ವಾಲ್ ಕೇವಲ 24 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ್ದರು. ಆ ಪಂದ್ಯದಲ್ಲಿ ಇಶಾನ್ ಕಿಶನ್ ಹಾಗೂ ಇನ್ನೋರ್ವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಕೂಡ ಅರ್ಧಶತಕ ಸಿಡಿಸಿ ತಮ್ಮ ಫಾರ್ಮ್ ತೋರಿದರು.
ಕೊನೆಯಲ್ಲಿ ಮಿಂಚಿದ ರಿಂಕು ಸಿಂಗ್ ಮತ್ತೊಮ್ಮೆ ಫಿನಿಶರ್ ಆಗಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ರಿಂಕು ಕ್ರಮೇಣ ಆರನೇ ಸ್ಥಾನದಲ್ಲಿ ಸ್ಥಿರವಾಗುತ್ತಿದ್ದಾರೆ. ಆದರೆ ಐದನೇ ಕ್ರಮಾಂಕದಲ್ಲಿ ಆಡುತ್ತಿರುವ ತಿಲಕ್ ಪರಿಸ್ಥಿತಿ ಸ್ವಲ್ಪ ಜಟಿಲವಾಗಿದೆ. ಮೊದಲೆರಡು ಟಿ20ಯಲ್ಲಿ ಕೇವಲ 12 ಎಸೆತಗಳನ್ನು ಅವರು ಎದುರಿಸಿದ್ದರು. ಮೊದಲ ಪಂದ್ಯದಲ್ಲಿ 10 ಎಸೆತಗಳಲ್ಲಿ 12 ರನ್ ಗಳಿಸಿದ ಅವರು, ರಿಂಕು ಅವರಿಗಿಂತ ಮುಂದೆ ಬಂದಿದ್ದರಿಂದ ಎರಡನೇ ಪಂದ್ಯದಲ್ಲಿ ಕೊನೆಯ ಎರಡು ಎಸೆತಗಳನ್ನು ಮಾತ್ರ ಆಡುವ ಅವಕಾಶ ಪಡೆದರು. ಸರಣಿಯಲ್ಲಿ ತಿಲಕ್ ಅವರ ಸಾಮರ್ಥ್ಯ ಸಾಬೀತುಪಡಿಸಲು ಇದು ಕೊನೆಯ ಅವಕಾಶವಾಗಿದೆ. ಏಕೆಂದರೆ ಕೊನೆಯ ಎರಡು ಪಂದ್ಯಗಳಿಗೆ ಶ್ರೇಯಸ್ ಅಯ್ಯರ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಆಗ ತಿಲಕ್ ಅಂತಿಮ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು.