ಬೆಂಗಳೂರು: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು ಹಾಗೂ ಭಾರತೀಯ ಸೇನೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 50 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಶುಕ್ರವಾರ ರಾತ್ರಿ 9.30ರ ಹೊತ್ತಿಗೆ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಪ್ರಾಂಜಲ್ ಅವರ ಪಾರ್ಥೀವ ಶರೀರ ಆಗಮಿಸಿದ್ದು, ಈ ವೇಳೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರು ಹುತಾತ್ಮ ಪ್ರಾಂಜಲ್ ಅವರಿಗೆ ಅಂತಿಮ ಗೌರವ ನಮನ ಸಲ್ಲಿಸಿದರು.
ನ. 22ರಂದು ರಜೌರಿ ಸೆಕ್ಟರ್‌ನಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 63ನೇ ರಾಷ್ಟ್ರೀಯ ರೈಫಲ್ಸ್‌ನ 29 ವರ್ಷದ ಕರುನಾಡ ವೀರ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಹುತಾತ್ಮ ಪ್ರಾಂಜಲ್ ಅವರಿಗೆ ಅಂತಿಮ ಗೌರವ ನಮನ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕ್ಯಾಪ್ಟನ್ ಪ್ರಾಂಜಲ್ ಅವರು ತಮ್ಮ ತಂಡದೊಂದಿಗೆ ಕಾರ್ಯಾಚರಣೆ ನಡೆಸಿದ್ದರು. ನಾಗರಿಕರ ಜೊತೆ ಸಮಾಲೋಚನೆ ನಡೆಸುತ್ತಿರುವ ಸಂದರ್ಭದಲ್ಲಿ ಉಗ್ರರಿಂದ ತೀವ್ರವಾದ ದಾಳಿ ನಡೆದಿದೆ. ಈ ವೇಳೆ ಪ್ರಾಂಜಲ್ ಅವರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ನಾಗರಿಕರ ರಕ್ಷಣೆ ನಿಂತಿದ್ದು, ಈ ದಾಳಿಯಲ್ಲಿ ಪ್ರಾಂಜಲ್ ಅವರು ತೀವ್ರವಾಗಿ ಗಾಯಗೊಂಡು ಹುತಾತ್ಮರಾದರು ಎಂದು ಸ್ಮರಿಸಿದರು.
Laxmi News 24×7