ಚಾಮರಾಜನಗರ: ಸರಹದ್ದಿನ ಕಾದಾಟದಲ್ಲಿ ಹುಲಿಯೊಂದು ತೀವ್ರವಾಗಿ ಗಾಯಗೊಂಡು ಮೇಲಕ್ಕೆ ಏಳಲಾರದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಕಾಲೋನಿ ಸಮೀಪ ನಡೆದಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯ ವ್ಯಾಪ್ತಿಯ ಜನವಸತಿ ಸಮೀಪವೇ ಗಾಯಗೊಂಡ ಹುಲಿ ತೀರಾ ನಿತ್ರಾಣಗೊಂಡ ಸ್ಥಿತಿಯಲ್ಲಿ ಕಾಣಿಸಿಕೊಂಡಿದೆ.
ಹುಲಿಗೆ 4 ವರ್ಷಗಳಾಗಿರಬಹುದು ಎಂದು ಅಂದಾಜು ಮಾಡಲಾಗಿದ್ದು, ಮತ್ತೊಂದು ಗಂಡು ಹುಲಿ ಜೊತೆಗಿನ ಸರಹದ್ದಿನ ಕಾದಾಟದಲ್ಲಿ ಗಾಯಗೊಂಡಿದೆ. ಹುಲಿ ಈಗಾಗಲೇ ನಿತ್ರಾಣಗೊಂಡಿರುವುದರಿಂದ ಚುಚ್ಚುಮದ್ದು ಕೊಟ್ಟು ಸೆರೆ ಹಿಡಿಯಲಾಗಲ್ಲ, ಬೋನಿನ ಮೂಲಕ ಸೆರೆ ಹಿಡಿಯಲು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಬಂಡೀಪುರ ಸಿಎಫ್‌ಒ ರಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಏನಿದು ಸರಹದ್ದಿನ ಕದನ: ಗಂಡು ಹುಲಿಗಳು ಸಾಮಾನ್ಯವಾಗಿ ಅರಣ್ಯ ಪ್ರದೇಶದಲ್ಲಿ ಇಂತಿಷ್ಟು ಸ್ಥಳವೆಂದು ಗುರುತಿಸಿಕೊಂಡು ವಾಸ ಮಾಡುತ್ತವೆ. ಹೆಣ್ಣು ಹುಲಿಗಳ ಸಖ್ಯ ದೊರೆತಾಗ ಮಾತ್ರ ಕೆಲ ತಿಂಗಳು ಒಟ್ಟಿಗೆ ಇರಲಿವೆ. ಇನ್ನು, ಮರಿಗಳು ಕಾಪಾಡುವ ಹೊತ್ತಿನಲ್ಲಿ ತಾಯಿ ಹುಲಿ ಒಟ್ಟಿಗೆ ತನ್ನ ಮರಿಗಳ ಜೊತೆ ಇರುವುದು ಬಿಟ್ಟರೆ ತಾನು ಗುರುತಿಸಿಕೊಂಡ ಪ್ರದೇಶದಲ್ಲಿ ಹುಲಿ ಒಂಟಿಯಾಗಿ ಇರಲಿದೆ.
ಒಂದು ಪ್ರದೇಶಕ್ಕೆ ಮತ್ತೊಂದು ಹುಲಿ ಬಂದಾಗ ಇಲ್ಲವೇ ಹೊಸ ಸರಹದ್ದನ್ನು ಹುಲಿ ರಚನೆ ಮಾಡುವಾಗ ಅಲ್ಲಿದ್ದಂತ ಹುಲಿ ಜೊತೆಗೆ ಕಾದಾಟ ನಡೆಸಲಿದ್ದು, ಬಲಶಾಲಿ ಹುಲಿ ಹೊಸ ಸರಹದ್ದಿನಲ್ಲಿದ್ದರೇ ಸೋತ ಹುಲಿ ಅನಿವಾರ್ಯವಾಗಿ ಆ ಪ್ರದೇಶ ಬಿಟ್ಟು ಬರಬೇಕಾಗುತ್ತದೆ. ಈ ರೀತಿಯ ಸರಹದ್ದಿನ ಕಾದಾಟದಲ್ಲಿ ಹುಲಿ ಗಾಯಗೊಂಡಿದೆ ಎನ್ನಲಾಗಿದೆ.
ಇತ್ತೀಚಿನ ಘಟನೆಗಳು: ಅಸ್ವಸ್ಥಗೊಂಡು ರಸ್ತೆ ಪಕ್ಕದ ಚರಂಡಿಯಲ್ಲಿ ಬಿದ್ದಿದ್ದ ಚಿರತೆ ಬೆಕ್ಕು (ಕಾಡು ಬೆಕ್ಕು) ಅನ್ನು ಅರಣ್ಯಾಧಿಕಾರಿಗಳು ಸಂರಕ್ಷಿಸಿದ್ದ ಘಟನೆ ಶಿವಮೊಗ್ಗದ ಹೊಸನಗರದ ಪುರಪ್ಪೆಮನೆ ಗ್ರಾಮದ ಬಳಿ ಕೆಲ ದಿನಗಳ ಹಿಂದೆ ನಡೆದಿತ್ತು. ಇಲ್ಲಿಯ ಪುರಪ್ಪೆಮನೆ – ಗಡಿಕಟ್ಟೆ ಗ್ರಾಮದ ನಡುವಿನ ರಸ್ತೆ ಪಕ್ಕದ ಚರಂಡಿಯಲ್ಲಿ ಚಿರತೆ ಬೆಕ್ಕು ಅಸ್ವಸ್ಥವಾಗಿ ಬಿದ್ದಿತ್ತು.
ತಕ್ಷಣ ಹೊಸನಗರ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ, ಅದನ್ನು ರಕ್ಷಣೆ ಮಾಡಿ ಚಿಕಿತ್ಸೆಗೆಂದು ಶಿವಮೊಗ್ಗದ ಹುಲಿ ಮತ್ತು ಸಿಂಹಧಾಮಕ್ಕೆ ರವಾನಿಸಿದ್ದರು. ಹುಲಿ ಮತ್ತು ಸಿಂಹಧಾಮದ ವೈದ್ಯಾಧಿಕಾರಿಗಳು ಇದಕ್ಕೆ ಸೂಕ್ತ ಚಿಕಿತ್ಸೆ ನೀಡಿದ್ದರು. ಚಿರತೆ ಬೆಕ್ಕು ಪಶ್ಚಿಮಘಟ್ಟ ದಟ್ಟಾರಣ್ಯದಲ್ಲಿ ಮಾತ್ರ ಕಂಡು ಬರುತ್ತವೆ. ಇವು ಕಾಡಿನಲ್ಲಿ ಸಣ್ಣಪುಟ್ಟ ಪ್ರಾಣಿಗಳನ್ನು ಬೇಟೆಯಾಡಿ ಬದುಕುತ್ತವೆ.
Laxmi News 24×7