ರಿಯಾದ್(ಸೌದಿ ಅರೇಬಿಯಾ): ಇಸ್ರೇಲ್-ಹಮಾಸ್ ಸಂಘರ್ಷ ನಿಲ್ಲುವಂತೆ ಕಾಣುತ್ತಿಲ್ಲ. ಈ ಬೆನ್ನಲ್ಲೇ ಇಸ್ರೇಲ್‌ಗೆ ಶಸ್ತ್ರಾಸ್ತ್ರ ರಫ್ತು ಮಾಡುವುದನ್ನು ನಿಲ್ಲಿಸುವಂತೆ ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಮಂಗಳವಾರ ಎಲ್ಲಾ ರಾಷ್ಟ್ರಗಳನ್ನು ಒತ್ತಾಯಿಸಿದ್ದಾರೆ.
ಬ್ರಿಕ್ಸ್ ಜಂಟಿ ಸಭೆಯ ಸಂದರ್ಭದಲ್ಲಿ ಈ ವಿನಂತಿ ಮಾಡಿದ್ದಾರೆ.
ಬ್ರಿಕ್ಸ್ ಗುಂಪಿನ ವರ್ಚುವಲ್ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸೌದಿ ಅರೇಬಿಯಾವು ಪ್ಯಾಲೇಸ್ಟಿನಿಯನ್ ರಾಜ್ಯವನ್ನು ಸ್ಥಾಪಿಸಲು ಗಂಭೀರ ಮತ್ತು ಸಮಗ್ರ ಶಾಂತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಒತ್ತಾಯಿಸುತ್ತಿದೆ. ಇಸ್ರೇಲ್ ಮತ್ತು ಪ್ಯಾಲೇಸ್ಟಿನಿಯನ್ ಎರಡರಲ್ಲೂ ಭದ್ರತೆ ಮತ್ತು ಸ್ಥಿರತೆಯನ್ನು ಸಾಧಿಸಲು ಅಂತರರಾಷ್ಟ್ರೀಯ ನಿರ್ಧಾರಗಳ ಅನುಷ್ಠಾನವನ್ನು ಹೊರತುಪಡಿಸಿ ಬೇರೆ ಮಾರ್ಗವಿಲ್ಲ ಎಂದರು.
ಗಾಜಾ ಸ್ಟ್ರಿಪ್‌ನಲ್ಲಿ ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಗಳನ್ನು ದೇಶವು ತಿರಸ್ಕರಿಸಿರುವುದನ್ನು ಅವರು ಪುನರುಚ್ಚರಿಸಿದರು ಮತ್ತು ಅವುಗಳನ್ನು ತಕ್ಷಣವೇ ನಿಲ್ಲಿಸುವಂತೆ ಒತ್ತಾಯಿಸಿದರು. ಬಳಿಕ, ಈ ಪ್ರದೇಶದಲ್ಲಿ ಶಾಶ್ವತ ಶಾಂತಿ ನೆಲೆಸಲು ಎರಡು ರಾಜ್ಯಗಳ ಪರಿಹಾರವೊಂದೇ ದಾರಿ, ಅಂತರರಾಷ್ಟ್ರೀಯ ನಿರ್ಧಾರಗಳ ಅನುಷ್ಠಾನದ ಮೂಲಕ ಪ್ಯಾಲೆಸ್ಟೈನ್‌ನಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಸಾಧಿಸಬೇಕು. ಹಾಗಾಗಿ, ಇಲ್ಲಿ ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಅನುಸರಿಸುವ ಮಹತ್ವವಿದೆ ಎಂದು ಒತ್ತಿ ಹೇಳಿದರು.