ಬೆಂಗಳೂರು: ತೆಲಂಗಾಣ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ಚುನಾವಣಾ ಮಾದರಿಯನ್ನೇ ತೆಲಂಗಾಣದಲ್ಲಿ ಕಾಂಗ್ರೆಸ್ ಅಳವಡಿಸಿಕೊಂಡಿದೆ.
ರಾಜ್ಯ ಸಿಎಂ, ಡಿಸಿಎಂ ಸೇರಿ ಸಚಿವರುಗಳು, ಕೈ ಶಾಸಕರ ದಂಡೇ ತೆಲಂಗಾಣ ಅಖಾಡಕ್ಕಿಳಿದಿದೆ. ಆ ಮೂಲಕ ಕರ್ನಾಟಕದ ಭರ್ಜರಿ ಜಯಭೇರಿಯನ್ನು ತೆಲಂಗಾಣದಲ್ಲೂ ಪುನರಾವರ್ತಿಸಲು ಮುಂದಾಗಿದೆ.
ತೆಲಂಗಾಣದ ಚುನಾವಣ ಅಖಾಡ ರಂಗೇರಿದೆ. ಆಡಳಿತಾರೂಢ ಬಿಆರ್ಎಸ್ ಹ್ಯಾಟ್ರಿಕ್ ಗೆಲುವಿಗೆ ಹೋರಾಟ ನಡೆಸಿದರೆ, ಕಾಂಗ್ರೆಸ್ ಮೊದಲ ಬಾರಿಗೆ ತೆಲಂಗಾಣದ ಗದ್ದುಗೆ ಹಿಡಿಯಲು ತನ್ನ ಎಲ್ಲ ಕಾರ್ಯತಂತ್ರ, ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ. ಇತ್ತ ಬಿಜೆಪಿಯೂ ಜಿದ್ದಾಜಿದ್ದಿನ ಸ್ಪರ್ಧೆ ನೀಡಲು ಕಸರತ್ತು ನಡೆಸುತ್ತಿದೆ. ಬಿಆರ್ಎಸ್ ಮುಖ್ಯಸ್ಥ ಕೆಸಿಆರ್ ಸರ್ಕಾರದ ವಿರುದ್ಧ ಆಡಳಿತಾರೂಢ ಅಲೆ ಇದ್ದು, ಅದರ ಉಪಯೋಗ ಪಡೆಯಲು ಕಾಂಗ್ರೆಸ್ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ.
ಚುನಾವಣಾ ಸಮೀಕ್ಷೆಯನ್ನು ನಂಬುವುದಾದರೆ ತೆಲಂಗಾಣದಲ್ಲಿ ಈ ಬಾರಿ ಬಿಆರ್ಎಸ್ ಹಾಗೂ ಕಾಂಗ್ರೆಸ್ ಮಧ್ಯೆ ಜಿದ್ದಾಜಿದ್ದು ಏರ್ಪಟ್ಟಿದೆ. ಬಿಆರ್ಎಸ್ ಗೆ ಕೌಂಟರ್ ಕೊಡಲು ಕಾಂಗ್ರೆಸ್ ತೆಲಂಗಾಣದಲ್ಲೂ ಕರ್ನಾಟಕ ಮಾದರಿ ಗ್ಯಾರಂಟಿ ಮೊರೆ ಹೋಗಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಆರು ಗ್ಯಾರಂಟಿಗಳನ್ನು ಘೋಷಿಸಿ ಮತಬೇಟೆಗೆ ಇಳಿದಿದೆ. ಅದಕ್ಕಾಗಿನೇ ಕಾಂಗ್ರೆಸ್ ರಾಜ್ಯದ ಕೈ ನಾಯಕರ ದಂಡನ್ನೇ ತೆಲಂಗಾಣಕ್ಕೆ ಕಳುಹಿಸಿದೆ. ರಾಜ್ಯ ಕಾಂಗ್ರೆಸ್ನ ಅತಿರಥ ಮಹಾರಥ ನಾಯಕರೇ ತೆಲಂಗಾಣದ ಚುನಾವಣಾ ರಣಕಣದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಸಿಎಂ, ಡಿಸಿಎಂರಿಂದ ತೆಲಂಗಾಣದಲ್ಲಿ ಮತಬೇಟೆ: ತೆಲಂಗಾಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ತೆಲಂಗಾಣದಲ್ಲಿ ಬಿರುಸಿನ ಮತಬೇಟೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಲು ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಮುಖರಾಗಿದ್ದಾರೆ. ಪಕ್ಷ ಸಂಘಟನೆ ಹಾಗೂ ಪಂಚ ಗ್ಯಾರಂಟಿಗಳನ್ನು ಜನಮನ ಮುಟ್ಟುವಂತೆ ಮಾಡಿದ್ದರು. ಅದೇ ಮಾದರಿಯ ಚುನಾವಣಾ ರಣನೀತಿಯನ್ನು ತೆಲಂಗಾಣದಲ್ಲಿ ಕಾಂಗ್ರೆಸ್ ಕಾರ್ಯರೂಪಕ್ಕೆ ತರುತ್ತಿದೆ.