ಬೆಂಗಳೂರು: ರಾಜಧಾನಿಯಿಂದ 60-80 ಕಿ.ಮೀ.
ದೂರದಲ್ಲಿ ಜಾಗತಿಕ ದರ್ಜೆಯ ‘ಜ್ಞಾನ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನಾ ನಗರ’ (ಕೆಹೆಚ್‌ಐಆರ್)ವನ್ನು ಅಭಿವೃದ್ಧಿ ಪಡಿಸಲಾಗುವುದು. ಇಲ್ಲಿ 40 ಸಾವಿರ ಕೋಟಿ ರೂ. ಹೂಡಿಕೆ ಆಗಲಿದ್ದು, 80 ಸಾವಿರದಿಂದ 1 ಲಕ್ಷ ಉದ್ಯೋಗ ಸೃಷ್ಟಿ ಆಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಉದ್ದೇಶಿತ ಕೆಹೆಚ್‌ಐಆರ್ ಸಿಟಿ ಬಗ್ಗೆ ಗಣ್ಯ ಉದ್ಯಮಿಗಳು, ವೈದ್ಯರು, ಶಿಕ್ಷಣ ತಜ್ಞರು ಮತ್ತು ಸಂಶೋಧಕರ ಸಲಹೆ, ಅಭಿಪ್ರಾಯಗಳನ್ನು ಪಡೆಯಲು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ದುಂಡು ಮೇಜಿನ ಸಭೆಯ ಬಳಿಕ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಜೊತೆಗೂಡಿ ಸುದ್ದಿಗೋಷ್ಟಿ ಉದ್ದೇಶಿಸಿ ಅವರು ಮಾತನಾಡಿದರು. ಜಗತ್ತಿನ ಅತ್ಯುತ್ತಮ ಕಂಪನಿಗಳು, ವಿಶ್ವವಿದ್ಯಾಲಯಗಳ ಕ್ಯಾಂಪಸ್, ಆಸ್ಪತ್ರೆ, ಆರ್ & ಡಿ ಕೇಂದ್ರಗಳು, ಆಧುನಿಕ ಸ್ಟಾರ್ಟಪ್ಸ್, ಕೆಹೆಚ್‌ಐಆರ್ ಸಿಟಿಯಲ್ಲಿ ನೆಲೆಯೂರಲಿವೆ. ಒಟ್ಟು ಎರಡು ಹಂತಗಳಲ್ಲಿ ತಲಾ ಒಂದು ಸಾವಿರ ಎಕರೆಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಈ ಯೋಜನೆ ಸಾಕಾರಗೊಂಡರೆ 1 ಲಕ್ಷ ಕೋಟಿ ರೂ.ಗಳಷ್ಟು ವಾರ್ಷಿಕ ವರಮಾನ ಉತ್ಪತ್ತಿಯಾಗಲಿದ್ದು, ಇದರಿಂದ ರಾಜ್ಯದ ಜಿಡಿಪಿಗೆ ಶೇಕಡ 5ರಷ್ಟು ಕೊಡುಗೆ ಬರಲಿದೆ ಎಂದು ತಿಳಿಸಿದರು.
ಅಮೆರಿಕ, ಸಿಂಗಪುರ, ಜಪಾನ್, ಅರಬ್, ಸ್ವೀಡನ್, ಡೆನ್ಮಾರ್ಕ್, ಚೀನಾ ಸೇರಿ ಮುಂತಾದ ದೇಶಗಳಲ್ಲಿ ಇಂತಹ ಸಿಟಿ ಗಳಿವೆ. ನಿರೀಕ್ಷಿತ ಮಟ್ಟದ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಬೇಕೆಂದರೆ ಆರೋಗ್ಯ, ಶಿಕ್ಷಣ, ಸಂಶೋಧನೆ, ನಾವೀನ್ಯತೆ, ವಿಜ್ಞಾನ, ತಂತ್ರಜ್ಞಾನ ಇವುಗಳ ಮೇಲೆ ಗಮನವನ್ನು ಕೇಂದ್ರೀಕರಿಸಬೇಕಾಗಿದೆ. ಬೆಂಗಳೂರು ಇವುಗಳ ಪ್ರಮುಖ ಸ್ಥಳವಾಗಿದ್ದು, ಇದರ ಗರಿಷ್ಠ ಲಾಭವನ್ನು ನಾವು ಪಡೆದುಕೊಳ್ಳಬೇಕಾಗಿದೆ ಎಂದರು.
Laxmi News 24×7