Breaking News

ಹಳೆ ಜಾತಿ ಗಣತಿ ವರದಿ ಕೈಬಿಡಿ, ಹೊಸದಾಗಿ ಸಮೀಕ್ಷೆ ನಡೆಸಿ: ವೀರಶೈವ ಮಹಾಸಭೆ ಆಗ್ರಹ

Spread the love

ಬೆಂಗಳೂರು: ಹಲವು ಲೋಪದೋಷಗಳಿಂದ ಕೂಡಿರುವ ಜಾತಿ ಗಣತಿ ಸಮೀಕ್ಷಾ ವರದಿಯನ್ನು ಸ್ವೀಕರಿಸದೆ ಹೊಸದಾಗಿ ವೈಜ್ಞಾನಿಕತೆಯಿಂದ ಕೂಡಿದ ಜಾತಿ ಗಣತಿ ಸಮೀಕ್ಷೆ ನಡೆಸಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭೆಯು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಜಾತಿ ಗಣತಿ ವರದಿ ಈ ತಿಂಗಳ ಅಂತ್ಯದೊಳಗೆ ಸಲ್ಲಿಕೆಯಾಗುತ್ತಿರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಗುರುವಾರ ಅಖಿಲ ಭಾರತ ವೀರಶೈವ ಮಹಾಸಭೆ ಪದಾಧಿಕಾರಿಗಳು ಸಭೆ ನಡೆಸಿದರು. ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷರಾದ ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ಜಾತಿ ಗಣತಿ ಸಮೀಕ್ಷೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ನಡೆಸಿರುವ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಆಧರಿಸಿದ ಜಾತಿ ಗಣತಿ ಸಮೀಕ್ಷೆಯ ಅಂಕಿ ಅಂಶಗಳಲ್ಲಿ ಸಾಕಷ್ಟು ಲೋಪದೋಷಗಳಿವೆ. ಜಾತಿ ಗಣತಿ ಸಮೀಕ್ಷೆ ಸಮರ್ಪಕವಾಗಿ ನಡೆದಿಲ್ಲ. ಹಲವರ ಮನೆಗಳಿಗೆ ಭೇಟಿಯನ್ನೇ ನೀಡದೇ ವರದಿ ಸಿದ್ಧಪಡಿಸಲಾಗಿದೆ ಎನ್ನುವ ದೂರುಗಳಿವೆ. ವೀರಶೈವ-ಲಿಂಗಾಯತ ಸಮುದಾಯದ ಜನಸಂಖ್ಯೆಯನ್ನು ಸಮೀಕ್ಷೆಯಲ್ಲಿ ಕಡಿಮೆ ತೋರಿಸಲಾಗಿದೆ ಎನ್ನುವ ಮಾಹಿತಿಗಳಿವೆ. ಇದರಿಂದ ಸಮಾಜಕ್ಕೆ ತೀವ್ರ ಸ್ವರೂಪದ ನಷ್ಠವಾಗಲಿದೆ ಎಂದು ಸಭೆಯಲ್ಲಿ ಪದಾಧಿಕಾರಿಗಳು ಹೇಳಿದರು.

ಜಾತಿ ಗಣತಿ ವರದಿ 8 ವರ್ಷಗಳಷ್ಟು ಹಳೆಯದಾಗಿದ್ದು ಹಲವಾರು ನ್ಯೂನತೆಗಳಿಂದ ಕೂಡಿದೆ. ಲೋಪದೋಷಗಳನ್ನು ಸರಿಪಡಿಸಿ ಹೊಸದಾಗಿ, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವೈಜ್ಞಾನಿಕ ಮಾದರಿಯಲ್ಲಿ ಜಾತಿ ಗಣತಿ ಸಮೀಕ್ಷೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.


Spread the love

About Laxminews 24x7

Check Also

ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕಾಮಗಾರಿ ಕೈಗೊಳ್ಳಿ :ಶಾಸಕ ರಾಜು ಶೆಠ್

Spread the love ಫ್ಲೈಓವರ್ ಕಾಮಗಾರಿಗೆ ಸಂಬಂಧಿಸಿದ ಪ್ರಮುಖ ಪ್ರದೇಶಗಳ ಪರಿಶೀಲನೆ ನಾಗರಿಕರ ಸುರಕ್ಷತೆ, ತುರ್ತು ಸೇವೆಗಳ ಪ್ರವೇಶ ಮಾರ್ಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ