ಬೆಂಗಳೂರು : ಬಿಜೆಪಿಯವರು ಮೊದಲೇ ಮಾತನಾಡಿದ್ದರೆ ಪ್ರತಿಪಕ್ಷದ ನಾಯಕರು ಸಿಗುತ್ತಿದ್ದರೇನೋ, ಹಲವು ನಾಯಕರು ನನ್ನ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ.
ಅವರ ಮಾತು ಕೇಳಿ ಸಂತೋಷವಾಗಿದೆ. ಅವರು ನನಗೆ ಖೆಡ್ಡಾ ತೋಡಲು ಹೊರಟಿದ್ದಾರೆ. ಆದರೆ, ಅವರೇ ಖೆಡ್ಡಾಕ್ಕೆ ಬೀಳುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಲೇವಡಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರೇ ತಿಂದು ತೇಗಿದವರು. ನನ್ನ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಬಿಜೆಪಿಯವರದ್ದು ಸುಳ್ಳಿನ ಕಾರ್ಖಾನೆ. ಕಿಯೋನಿಕ್ಸ್ನಲ್ಲಿ ದೊಡ್ಡ ಅಕ್ರಮ ಅನ್ನುತ್ತಿದ್ದಾರೆ. ಪರ್ಸೆಂಟೇಜ್ ಇಲ್ಲದೇ ಕೆಲಸ ಆಗಲ್ಲ ಅಂತಿದ್ದಾರೆ. ಬಿಲ್ ಕೊಟ್ಟಿಲ್ಲ ಅಂತ ಬಿಜೆಪಿಯವರು ಹೇಳ್ತಾರೆ. ಎಷ್ಟು ಪೆಂಡಿಂಗ್ ಇದೆ ಅಂತ ಅವರಿಗೆ ಗೊತ್ತಿದೆಯಾ?. ಬರೀ 16 ಕೋಟಿ ರೂ. ಮಾತ್ರ ಪೆಂಡಿಂಗ್ ಇದೆ. ಮ್ಯಾನ್ಯುವಲ್ ಬಿಲ್ಲಿಂಗ್ ಆಗಿದೆ. ಅದನ್ನು ಚೆಕ್ ಮಾಡುವುದಕ್ಕೆ ಪೆಂಡಿಂಗ್ ಇಡಲಾಗಿದೆ ಎಂದರು.
ಮೂರನೇ ಪಾರ್ಟಿ ಪರಿಶೀಲನೆ ಆಗದೇ ಉಳಿದಿದೆ. ಆ ಬಿಲ್ ಮಾಡಬೇಡಿ ಅಂತ ನಾನೇ ಹೇಳಿದ್ದೇನೆ. ಆರ್ಥಿಕ ಇಲಾಖೆಯ ಸ್ಪಷ್ಟ ಆದೇಶವೇ ಇದೆ. ನಾನು ಪರಿಶೀಲಿಸದೇ ಹಣ ಹಾಗೆ ಕೊಡಬೇಕಾ?. ಜನರ ತೆರಿಗೆ ಹಣಕ್ಕೆ ಬೆಲೆ ಇಲ್ಲವೇ?. ಜನರ ತೆರಿಗೆ ಹಣ ಹಾಗೆಯೇ ಕೊಟ್ಟುಬಿಡಬೇಕಾ?. ಮೂರು ವರ್ಷದಿಂದ ವ್ಯಾಪಾರ ಇಟ್ಟಿದ್ದರು. ಅದನ್ನ ನಾವು ಬಂದ ಮೇಲೆ ಕಠಿಣ ಮಾಡಿದ್ದೇವೆ. ಅದಕ್ಕೆ ಬಿಜೆಪಿಯವರು ಈಗ ಕುಣಿಯುತ್ತಿದ್ದಾರೆ. ನಾವು ಕಠಿಣ ಮಾಡುತ್ತಿರುವುದಕ್ಕೆ ಅವರಿಗೆ ಕಷ್ಟವಾಗುತ್ತಿದೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಕಿಯೋನಿಕ್ಸ್ನಲ್ಲಿ 500 ಕೋಟಿ ರೂ. ಅವ್ಯವಹಾರ : ಅಕೌಂಟೆಂಟ್ ಜನರಲ್ ರಿಪೋರ್ಟ್ನಂತೆ ಮಾಡುತ್ತಿದ್ದೇವೆ. ಅವರ ಆಡಿಟ್ ಪ್ರಕಾರವೇ ನಾವು ಕೆಲಸ ಮಾಡುತ್ತಿದ್ದೇವೆ. ಕಿಯೋನಿಕ್ಸ್ನಲ್ಲಿ 500 ಕೋಟಿ ರೂ. ಅವ್ಯವಹಾರ ಆಗಿದೆ. ಅದನ್ನು ಆಡಿಟ್ನಲ್ಲಿ ಎತ್ತಿ ಹಿಡಿಯಲಾಗಿದೆ. 2019 ರಿಂದ 2023 ರವರೆಗೆ ಕಿಯೋನಿಕ್ಸ್ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದರು.