ಬೆಳಗಾವಿ: ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಕುರಿತ ಚರ್ಚೆಗೆ ವಿಧಾನ ಪರಿಷತ್ನಲ್ಲಿ ಎರಡು ದಿನ ಮೀಸಲಿಡುವುದರ ಜೊತೆಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು. ಸುವರ್ಣ ವಿಧಾನಸೌಧದಲ್ಲಿ ವಿಧಾನಸಭೆ ಸಭಾಧ್ಯಕ್ಷ ಯು ಟಿ ಖಾದರ್ ಅವರ ಜೊತೆಗೆ ಅಧಿವೇಶನ ಸಿದ್ಧತೆ ಪರಿಶೀಲಿಸಿದ ಬಳಿಕ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಮೊದಲ ವಾರದ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಮಂಗಳವಾರ ಮತ್ತು ಬುಧವಾರ ಎರಡು ದಿನ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಗೆ ಮೀಸಲಿಡಲಾಗುವುದು. ಈ ಭಾಗದ ಹೆಚ್ಚಿನ ಸಮಸ್ಯೆಗಳನ್ನು ಪರಿಹರಿಸುವ ಹಾಗೂ ಸೌಲಭ್ಯಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಹಿಂದೆ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಅಧಿವೇಶನ ನಡೆಸುವ ಮೂಲಕ ಬೆಳಗಾವಿ ಕರ್ನಾಟಕದ ಗಂಡು ಮೆಟ್ಟಿದ ಸ್ಥಳ ಎಂಬುದನ್ನು ಸಾಬೀತುಪಡಿಸಲಾಗಿತ್ತು. ಇದರಿಂದ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಮಹಾರಾಷ್ಟ್ರದ ಕೂಗನ್ನು ತಗ್ಗಿಸಿದಂತಾಯಿತು. ಆದರೆ, ಸೌಧ ನಿರ್ಮಾಣದ ಆಶಯ ಮಾತ್ರ ಇನ್ನು ಈಡೇರದೇ ಇರುವುದು ವಿಪರ್ಯಾಸ ಎಂದು ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ಬೆಳಗಾವಿ ಅಧಿವೇಶನ ಮುಗಿದ ಬಳಿಕ ಮಹಾರಾಷ್ಟ್ರದ ನಾಗ್ಪುರ ಮತ್ತು ಮುಂಬೈಗೆ ಹೋಗಿ ಅಲ್ಲಿ ಎರಡೂ ಕಡೆ ಅಧಿವೇಶನ ಹೇಗೆ ನಡೆಸುತ್ತಾರೆ ಮತ್ತು ನಮಗೂ ಅವರಿಗೂ ಏನು ವ್ಯತ್ಯಾಸವಿದೆ ಎಂಬುದನ್ನು ತಿಳಿದುಕೊಂಡು ಬರುತ್ತೇವೆ. ಆ ರೀತಿ ರಾಜ್ಯದಲ್ಲೂ ಅಧಿವೇಶನ ನಡೆಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಬಸವರಾಜ ಹೊರಟ್ಟಿ ತಿಳಿಸಿದರು.
ಅದೇ ರೀತಿ ಬೆಳಗಾವಿಯ ಸುವರ್ಣವಿಧಾನಸೌಧ ಆವರಣದ 20 ಏಕರೆ ಜಾಗದಲ್ಲಿ ಶಾಸಕರ ಭವನ ನಿರ್ಮಾಣ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸುತ್ತೇವೆ. ಆ ಶಾಸಕರ ಭವನ ನಿರ್ವಹಣೆಯನ್ನು ಯಾವುದೋ ಹೋಟೆಲ್ ನವರಿಗೆ ನೀಡಿ, ನಮ್ಮ ಶಾಸಕರು ಬಂದರೆ ಅವರಿಗೆ ಮೀಸಲಿಡುವ ಬಗ್ಗೆ ವಿಶೇಷ ಮಂಡಳಿ ಸಭೆಯಲ್ಲಿ ಮುಖ್ಯಮಂತ್ರಿ ಮತ್ತು ಸಂಬಂಧಿಸಿದವರಿಗೆ ತಿಳಿಸುತ್ತೇವೆ ಎಂದರು.
ಅಧಿಕಾರಿಗಳ ವಿರುದ್ಧ ಸ್ಪೀಕರ್ ಯು ಟಿ ಖಾದರ್ ಗರಂ: ಸುವರ್ಣ ವಿಧಾನಸೌಧ ಒಳಗೆ ಗೋಡೆ ಸ್ವಚ್ಛತೆ ಕಾಪಾಡದೇ ಇರುವುದಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರ ವಿರುದ್ಧ ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಗರಂ ಆದ ಘಟನೆ ನಡೆಯಿತು. ಲೋಕೋಪಯೋಗಿ ಇಲಾಖೆ ಎಕ್ಸಿಕ್ಯುಟಿವ್ ಎಂಜಿನಿಯರ್ಗೆ ತರಾಟೆಗೆ ತೆಗೆದುಕೊಂಡ ಯು.ಟಿ. ಖಾದರ್, ಏನ್ರೀ ನಿಮ್ಮ ಮನೆಯಾಗಿದ್ದರೆ ಹೀಗೆ ಇಟ್ಟುಕೊಳ್ಳುತ್ತಿದ್ದರಾ?. ಸುವರ್ಣ ವಿಧಾನಸೌಧಕ್ಕೆ ವರ್ಷಕ್ಕೆ 6 ಕೋಟಿ ರೂಪಾಯಿ ಖರ್ಚು ಮಾಡುತ್ತೇವೆ. 120ಕ್ಕೂ ಅಧಿಕ ಕಾರ್ಮಿಕರು ಸ್ವಚ್ಛತೆ ಕೈಗೊಳ್ಳಲು ಇದ್ದಾರೆ. ಏನ್ ಮಾಡ್ತಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇಲ್ಲಾ ಸರ್ ಸ್ವಚ್ಛತೆ ಮಾಡುತ್ತೇವೆ. 2016/17 ರಲ್ಲಿ ಗೋಡೆಗಳಿಗೆ ಬಣ್ಣ ಹೊಡೆಸಿದ್ದೇವೆ ಎಂದು ಸ್ಪಷ್ಟನೆ ನೀಡಿದರು.