ಬೆಂಗಳೂರು: ”ಹಳ್ಳಿಗಾಡಿನ ಜನರ ಮೇಲೆ ಪ್ರೀತಿ, ರೈತರ ಮೇಲೆ ಗೌರವ ಹಾಗೂ ಕರ್ನಾಟಕದ ಮೇಲೆ ಕಾಳಜಿ ಇದ್ದರೆ, ಮೊದಲು ಕೇಂದ್ರದಿಂದ ಪರಿಹಾರ ಕೊಡಿಸಲಿ” ಎಂದು ಸಿಎಂ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಬರ ಅಧ್ಯಯನಕ್ಕೆ ತಿರುಗೇಟು ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿಂದು ಇನ್ಫೋಸಿಸ್ ಸಂಸ್ಥೆ ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ವಿನ್ಯಾಸಗೊಳಿಸಿರುವ ಗಾಲಿ ಮೇಲಿನ ಲ್ಯಾಬ್ ಎಂಬ ವಿಶೇಷ ಬಸ್ಗೆ ಚಾಲನೆ ನೀಡಿ ಮಾತನಾಡಿದರು. ”ಕೇಂದ್ರದ ತಂಡ ಅಧ್ಯಯನ ಮಾಡಿಕೊಂಡು ಹೋಗಿದೆ, ಇನ್ನೂ ಕೂಡ ವರದಿ ಕೊಟ್ಟಿಲ್ಲ. ಬಿಜೆಪಿಯವರು ರಾಜಕೀಯಕ್ಕಾಗಿ ಬರ ಅಧ್ಯಯನಕ್ಕಾಗಿ ಹೋಗ್ತಿದ್ದಾರೆ. ಮೊದಲು ಕೇಂದ್ರ ಸರ್ಕಾರದ ಬಳಿ ಕುಳಿತು ದುಡ್ಡು ಕೊಡಿಸಲಿ. ಕೇಂದ್ರ ಸರ್ಕಾರದ ಅಧ್ಯಯನ ಮಾಡಿದೆ. ಇವರೇನು ಅಧ್ಯಯನ ಮಾಡೋಡು” ಎಂದು ಟೀಕಿಸಿದರು.