ಚಿಕ್ಕೋಡಿ: ಮಾಜಿ ಡಿಸಿಎಂ, ಕಾಂಗ್ರೆಸ್ ನಾಯಕ ಲಕ್ಷ್ಮಣ್ ಸವದಿ ಪುತ್ರ ಸುಮಿತ್ ಸವದಿ ಕೊರಳಲ್ಲಿ ಹುಲಿ ಉಗುರು ಹೋಲುವಂತಹ ಪೆಂಡೆಂಟ್ ಇರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಥಣಿ ಅರಣ್ಯ ಇಲಾಖೆ ಅಧಿಕಾರಿಗಳು ಸರ್ಚ್ ವಾರಂಟ್‌ನೊಂದಿಗೆ ಇಂದು ಅಥಣಿಯಲ್ಲಿರುವ ಸವದಿ ನಿವಾಸದಲ್ಲಿ ಶೋಧ ಕಾರ್ಯ ನಡೆಸಿದರು.
ಅರಣ್ಯ ಇಲಾಖೆ ಅಧಿಕಾರಿ ಪ್ರಶಾಂತ ಗಾಣಿಗೇರ ನೇತೃತ್ವದಲ್ಲಿ ಹತ್ತು ಮಂದಿ ಸಿಬ್ಬಂದಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಚಿದಾನಂದ ಸವದಿ ಅವರಿಂದ ಮಾಹಿತಿ ಪಡೆದುಕೊಂಡರು. ಇದೇ ವೇಳೆ, ಹುಲಿ ಉಗುರು ಹೋಲುವಂತಹ ಪೆಂಡೆಂಟ್ ಅನ್ನು ವಶಕ್ಕೆ ಪಡೆದುಕೊಂಡರು.
ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆಗೆ ಆಗಮಿಸುತ್ತಿದ್ದಂತೆ ಪತ್ನಿ ಸುಶೀಲಾ ಸವದಿ ಅಧಿಕಾರಿಗಳನ್ನು ಪ್ರಶ್ನಿಸಿದರು. “ಒಬ್ಬರು ಎಂಎಲ್‌ಎ ಮನೆಗೆ ಹೀಗೆ ಏಕಾಏಕಿ ಬರಕ್ಕಾಗುತ್ತಾ?, ಬರುವ ಹಾಗಿಲ್ಲ. ಅದಕ್ಕೆ ನಾನು ಕೇಳುತ್ತಿದ್ದೇನೆ?, ಸರ್ ಜೊತೆ ನೀವು ಮಾತನಾಡಿದ್ದೀರಾ?” ಎಂದೆಲ್ಲ ಅವರು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಚಿದಾನಂದ ಸವದಿ, ತಾಯಿಗೆ ಮನವರಿಕೆ ಮಾಡಿದರು. ಚಿದಾನಂದ ಸವದಿ ಬಳಿ ಇದ್ದ ಎರಡು ಹುಲಿ ಉಗುರು ಮಾದರಿಯನ್ನು ಅಧಿಕಾರಿಗಳು ವಶಕ್ಕೆ ಪಡೆದರು.
ಚಿದಾನಂದ ಸವದಿ ಮಾತನಾಡಿ, “ಹುಲಿ ಉಗುರು ಹೋಲುವಂತಹ ಪೆಂಡೆಂಟ್ ಅನ್ನು ನಮ್ಮ ಸಹೋದರಿಗೆ ಮದುವೆ ಸಮಯದಲ್ಲಿ ಸ್ನೇಹಿತರು ಉಡುಗೊರೆ ನೀಡಿದ್ದರು. ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇವತ್ತು ಅರಣ್ಯ ಇಲಾಖೆ ಅಧಿಕಾರಿಗಳು ಮನೆಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಹುಲಿ ಉಗುರಿನ ಮಾದರಿಯನ್ನು ಅಧಿಕಾರಿಗಳಿಗೆ ಒಪ್ಪಿಸಿದ್ದೇವೆ. ಯಾವುದೇ ತನಿಖೆಗೆ ನಾವು ಸಹಕಾರ ನೀಡುತ್ತೇವೆ. ನಮ್ಮ ತಂದೆಯವರಿಗೂ ಈ ವಿಷಯವನ್ನು ತಿಳಿಸಲಾಗಿದೆ. ನಮ್ಮ ಸಹೋದರ ಸುಮಿತ್ ಸವದಿ ಪ್ರವಾಸಕ್ಕೆ ಹೋಗಿದ್ದಾರೆ” ಎಂದು ಹೇಳಿದರು.