ಆಸ್ಟ್ರೇಲಿಯಾ ನೀಡಿರುವ 400 ರನ್‌ಗಳ ಗುರಿ ಬೆನ್ನತ್ತುವಲ್ಲಿ ವಿಫಲವಾದ ನೆದರ್ಲೆಂಡ್ಸ್ 309 ರನ್‌ಗಳ ಭಾರಿ ಅಂತರದ ಸೋಲು ಕಂಡಿತು.
ನವದೆಹಲಿ: ಐದು ಬಾರಿ ಏಕದಿನ ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ ಇಂದು ತಮ್ಮ ಹಳೆಯ ಚಾರ್ಮ್ ಪ್ರದರ್ಶಿಸಿತು. ನೆದರ್ಲೆಂಡ್ಸ್ ವಿರುದ್ಧ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಚಾಂಪಿಯನ್ ರೀತಿಯ ಪ್ರದರ್ಶನ ನೀಡಿ 29 ಓವರ್ ಮತ್ತು 309 ರನ್‌ಗಳಿಂದ ಪಂದ್ಯ ಗೆದ್ದುಕೊಂಡಿತು.
ಆಸ್ಟ್ರೇಲಿಯಾ ನೀಡಿದ 400 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಡಚ್ಚರು 21 ಓವರ್ನಲ್ಲಿ 90 ರನ್‌ಗಳಿಸಲಷ್ಟೇ ಶಕ್ತರಾದರು.
ಟೂರ್ನಿಯ ಆರಂಭದಲ್ಲಿ ಎರಡು ಸೋಲು ಕಂಡು ರನ್ರೇಟ್ ಕುಸಿತ ಅನುಭವಿಸಿದ್ದ ಕಾಂಗರೂ ಪಡೆ ದೆಹಲಿಯ ಬ್ಯಾಟಿಂಗ್‌ಸ್ನೇಹಿ ಪಿಚ್ನಲ್ಲಿ ಅಬ್ಬರದ ಆಟ ಆಡಿ ಬೃಹತ್ ಮೊತ್ತ ಕಲೆಹಾಕಿತು. ಡೇವಿಡ್ ವಾರ್ನರ್, ಗ್ಲೆನ್ ಮ್ಯಾಕ್ಸ್ವೆಲ್ ಶತಕ ಮತ್ತು ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲಬುಶೇನ್ ಅರ್ಧಶತಕ ಗಳಿಸಿದರು. ಇವರ ಇನ್ನಿಂಗ್ಸ್ ನೆರವಿನಿಂದ ತಂಡ 399 ರನ್ ಗಳಿಸಿತು.
ನೆದರ್ಲೆಡ್ಸ್ ಆರಂಭಿಕ ಆಟಗಾರ ವಿಕ್ರಮಜಿತ್ ಸಿಂಗ್ 25 ರನ್ ಗಳಿಸಿದ್ದು ಬಿಟ್ಟರೆ, ತಂಡದ ಬೇರಾವುದೇ ಆಟಗಾರ ದೊಡ್ಡ ಮೊತ್ತ ದಾಖಲಿಸಲಿಲ್ಲ. ಮ್ಯಾಕ್ಸ್ ಓಡೌಡ್ (6), ಕಾಲಿನ್ ಅಕರ್ಮನ್ (10), ಸೈಬ್ರಾಂಡ್ ಎಂಗಲ್ಬ್ರೆಕ್ಟ್ (11), ಬಾಸ್ ಡಿ ಲೀಡೆ (4), ಲೋಗನ್ ವ್ಯಾನ್ ಬೀಕ್ (0), ರೋಲೋಫ್ ವ್ಯಾನ್ ಡೆರ್ ಮೆರ್ವೆ (0), ಆರ್ಯನ್ ದತ್ತ್ (1), ಪಾಲ್ ವ್ಯಾನ್ ಮೀಕೆರೆನ್ (0) 15 ರನ್ ಕೆಲೆಹಾಕಿದರು. ನಾಯಕ ಸ್ಕಾಟ್ ಎಡ್ವರ್ಡ್ಸ್ (12) ಅಜೇಯವಾಗುಳಿದರೂ ಏನು ಪ್ರಯೋಜನ ಆಗಲಿಲ್ಲ.
ದಾಖಲೆ: 21 ಓವರ್ಗೆ 90 ರನ್ ನೆದರ್ಲೆಂಡ್ಸ್ ಆಲ್ಔಟ್ ಆಗಿದ್ದರಿಂದ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ದಾಖಲೆಯ ಗೆಲುವು ಸಾಧಿಸಿತು. ಈ ಹಿಂದೆ ಆಸ್ಟ್ರೇಲಿಯಾ ಅಫ್ಘಾನಿಸ್ತಾನದ ವಿರುದ್ಧ 275 ರನ್‌ಗಳ ಗೆಲುವು ರೆಕಾರ್ಡ್ ಆಗಿತ್ತು. ಆಸಿಸ್ ತನ್ನ ದಾಖಲೆಯನ್ನೇ ಮುರಿದು ಇಂದು 309 ರನ್‌ಗಳಿಂದ ಗೆದ್ದು ಹೊಸ ದಾಖಲೆ ಬರೆಯಿತು.
ಗ್ಲೆನ್ ಮ್ಯಾಕ್ಸ್ವೆಲ್ ಪಂದ್ಯಶ್ರೇಷ್ಠ: ಆಸ್ಟ್ರೇಲಿಯಾ ಪರ ಆರಂಭದಲ್ಲಿ ವೇಗಿಗಳು ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿದರೆ, 15ನೇ ಓವರ್ ನಂತರ ದಾಳಿಗಿಳಿದ ಝಂಪಾ 3 ಓವರ್ ಮಾಡಿ ಕೇವಲ 8 ರನ್ ಕೊಟ್ಟು 4 ವಿಕೆಟ್ ಕಿತ್ತರು. ಮಿಚೆಲ್ ಮಾರ್ಷ್ 2 ಮತ್ತು ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್‌ವುಡ್, ಮಿಚೆಲ್ ಸ್ಟಾರ್ಕ್ ತಲಾ ಒಂದು ವಿಕೆಟ್ ಕಿತ್ತರು. 40 ಎಸೆತದಲ್ಲಿ ಶತಕ ಗಳಿಸಿದ ಗ್ಲೆನ್ ಮ್ಯಾಕ್ಸ್ವೆಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Laxmi News 24×7