ಮೈಸೂರು: “ಬರ ವಿಚಾರವನ್ನು ಕುಮಾರಸ್ವಾಮಿ ಸರಿಯಾಗಿ ತಿಳಿದುಕೊಂಡಿಲ್ಲ.
ಸುಮ್ಮನೆ ಆರೋಪ ಮಾಡುತ್ತಿದ್ದಾರೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸೋಮವಾರ ದಸರಾ ಏರ್ ಶೋ ವೀಕ್ಷಣೆ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, “ರಾಜ್ಯದಲ್ಲಿ ಈಗಾಗಲೇ ಬರಗಾಲ ಕಾಮಗಾರಿಗಳು ಆರಂಭವಾಗಿವೆ. ಕುಡಿಯುವ ನೀರು, ಮೇವು ಕೊಡುವ ಕೆಲಸ ಮಾಡುತ್ತಿದ್ದೇವೆ. ಕುಡಿಯುವ ನೀರಿಗೆ ಎಷ್ಟೇ ಹಣ ಖರ್ಚಾದರೂ ತೊಂದರೆ ಆಗಬಾರದು ಎಂದು ಸೂಚಿಸಿದ್ದೇನೆ. ಸದ್ಯಕ್ಕೆ ಮೇವಿಗೆ ಕೊರತೆ ಇಲ್ಲ. ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದರು.
“ಬರ ವಿಚಾರದಲ್ಲಿ ಕುಮಾರಸ್ವಾಮಿ ಸುಳ್ಳು ಹೇಳುತ್ತಿದ್ದಾರೆ. ಅವರು ಸರಿಯಾಗಿ ತಿಳಿದುಕೊಂಡಿಲ್ಲ. ಆರೋಪ ಮಾಡುವುದೇ ಅವರಿಗೆ ಗೊತ್ತಿರುವ ವಿಚಾರ. ರಾಜ್ಯದಲ್ಲಿ ವಿದ್ಯುತ್ ಕೃತಕ ಅಭಾವ ಸೃಷ್ಟಿ ಆರೋಪ ಮಾಡುತ್ತಿದ್ದಾರೆ. ಅದು ಕೇವಲ ಆರೋಪ. ಕಲ್ಲಿದ್ದಲು ಸಾಮರ್ಥ್ಯದ ಮೇಲೆ ವಿದ್ಯುತ್ ತಯಾರಿಕೆ ಆಗುತ್ತಿದೆ. ಡೊಮೆಸ್ಟಿಕ್ ಕಲ್ಲಿದ್ದಲಿನಿಂದ ಉತ್ಪಾದನೆ ಕಡಿಮೆಯಾಗುತ್ತಿದೆ. ಇದೆಲ್ಲಾ ಮಾಜಿ ಸಿಎಂಗೆ ಗೊತ್ತಿರಬೇಕು. ಸುಮ್ಮನೇ ಆರೋಪ ಮಾಡಬಾರದು” ಎಂದು ಹೇಳಿದರು.
ಮಹಾರಾಣಿ ಕಾಲೇಜು ಅಭಿವೃದ್ಧಿ: “ಈ ಹಿಂದೆ ಇದ್ದ ಸರ್ಕಾರ ಮಹಾರಾಣಿ ಕಾಲೇಜು ಅಭಿವೃದ್ಧಿಗೆ ಒಂದೇ ಒಂದು ಕೆಲಸ ಮಾಡಿಲ್ಲ. ಈಗಾಗಲೇ ಸೈನ್ಸ್ ಕಾಲೇಜು ಬಿದ್ದು ಹೋಗಿದೆ. ಮಹಾರಾಣಿ ಕಾಲೇಜು ಮುಂದೆ ಮಾತ್ರ ಹೆರಿಟೇಜ್ ಬಿಲ್ಡಿಂಗ್ ಇದೆ. ಅದನ್ನು ಒಡೆಯದೇ ರಿಪೇರಿ ಮಾಡಲಾಗುತ್ತದೆ. ಉಳಿದಂತೆ ಕಾಲೇಜಿನ ಮೂರು ವಿಭಾಗಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. 17 ಕೋಟಿ ವೆಚ್ಚದಲ್ಲಿ ಆರ್ಟ್ಸ್ ಕಾಲೇಜ್, ಸೈನ್ಸ್ ಕಾಲೇಜಿಗೆ 51 ಕೋಟಿ, 99 ಕೋಟಿ ವೆಚ್ಚದಲ್ಲಿ ಹಾಸ್ಟೆಲ್ ಹಾಗೂ ಕಾಮರ್ಸ್ ಕಾಲೇಜಿಗೆ ಈ ಹಿಂದೆ ಬಿಡುಗಡೆ ಮಾಡಿದ್ದ 40 ಕೋಟಿ ಬಳಕೆ ಆಗದೇ ಉಳಿದಿದೆ. ಅದನ್ನು ಬಳಸಿಕೊಳ್ಳಲಾಗುವುದು” ಎಂದು ತಿಳಿಸಿದರು.
ಏರ್ ಶೋ ಬಹಳ ಚೆನ್ನಾಗಿತ್ತು. ಕಳೆದ ಬಾರಿ ದೆಹಲಿಗೆ ಹೋದಾಗ ರಕ್ಷಣಾ ಸಚಿವರನ್ನು ಭೇಟಿ ಮಾಡಿ, ಏರ್ ಶೋ ಆಯೋಜನೆ ಮಾಡುವ ಬಗ್ಗೆ ಮನವಿ ಮಾಡಿದ್ದೆವು. ಅವರು ಕೂಡಲೇ ವಾಯುಪಡೆಗೆ ಸೂಚನೆ ನೀಡಿದರು. ಅದರಂತೆ ಏರ್ ಶೋ ಚೆನ್ನಾಗಿ ಮೂಡಿ ಬಂದಿದೆ. ನಾಡಿನ ಜನರಿಗೆ ಆಯುಧ ಪೂಜೆ, ವಿಜಯ ದಶಮಿಯ ಶುಭಾಶಯಗಳನ್ನು ಸಿಎಂ ತಿಳಿಸಿದರು.
ಇದಕ್ಕೂ ಮೊದಲು ಮಹಾರಾಣಿ ಕಾಲೇಜು ಮತ್ತು ವಸತಿ ನಿಲಯಕ್ಕೆ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.