ಬೆಳಗಾವಿ: ಅನೈತಿಕ ಸಂಬಂಧ ಶಂಕೆಯಿಂದ ಮಹಿಳೆಯನ್ನು ಆಕೆಯ ಪತಿ, ಸಹೋದರರು ಹಾಗೂ ಸಂಬಂಧಿಕರು ಮೂರು ವರ್ಷಗಳ ಹಿಂದೆ ಕೊಲೆ ಮಾಡಿ, ಕಾಣೆಯಾಗಿರುವುದಾಗಿ ಕಥೆ ಕಟ್ಟಿದ್ದ ಪ್ರಕರಣವನ್ನು ಭೇದಿಸುವಲ್ಲಿ ಬೆಳಗಾವಿ ಜಿಲ್ಲೆಯ ಮೂಡಲಗಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣದ ಸಂಪೂರ್ಣ ವಿವರ: ಗೋಕಾಕ್ ಪಟ್ಟಣದ ಶಿವಲೀಲಾ ವಿಠ್ಠಲ್ ಬಂಗಿ (32) ಎಂಬವರು ಕೊಲೆಯಾದವರು. ರಾಯಬಾಗ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಇವರಿಗೆ ಪತಿ ವಿಠ್ಠಲ ಮತ್ತು ಶಿವಲೀಲಾ ಸಹೋದರರು ನಿನ್ನ ನಡತೆ ಸರಿಯಿಲ್ಲ ಬದಲಾಗು ಎಂದು ಬುದ್ಧಿ ಹೇಳಿದ್ದರಂತೆ. ಆದರೆ ಮಹಿಳೆ ಸುಧಾರಿಸದ ಹಿನ್ನೆಲೆಯಲ್ಲಿ ಎಲ್ಲರೂ ಸೇರಿಕೊಂಡು ಕೊಲೆ ಮಾಡುವ ನಿರ್ಧಾರಕ್ಕೆ ಬರುತ್ತಾರೆ. ಗೋಕಾಕ್ ಮನೆಯಲ್ಲಿ 2020ರ ಜನವರಿಯಲ್ಲಿ ಶಿವಲೀಲಾ ಕೊಲೆ ಮಾಡಿ ಕ್ರೂಸರ್‌ನಲ್ಲಿ ಹೆಣ ಸಾಗಿಸಿದ್ದ ಹಂತಕರು, ಸವದತ್ತಿ ತಾಲೂಕಿನ ಹಿರೇಬುದ್ನೂರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಶವ ಬಿಸಾಕಿದ್ದರು. ಬಳಿಕ ಏನೂ ಅರಿಯದಂತೆ ಗಪ್ ಚುಪ್ ಇದ್ದರು.
ಶಿವಲೀಲಾ ಮನೆಯಲ್ಲಿ ಕಾಣಿಸದೇ ಇದ್ದಾಗ ಜನ ಪ್ರಶ್ನಿಸಿದ್ದು, ಆಕೆ ಕಾಣೆಯಾಗಿದ್ದಾಳೆ ಎಂದು ಮೂಡಲಗಿ ಠಾಣೆಯಲ್ಲಿ 2023ರ ಮಾರ್ಚ್ 13ರಂದು ಸಹೋದರ ಲಕ್ಕಪ್ಪ ಕಂಬಳಿ ದೂರು ದಾಖಲಿಸಿದ್ದರು. ಬಳಿಕ ಶಿವಲೀಲಾ ತವರು ಮೂಡಲಗಿ ತಾಲೂಕಿನ ಜೊಕ್ಕಾನಟ್ಟಿ ಗ್ರಾಮದಲ್ಲಿ ಬೀಟ್ ಪೊಲೀಸರಾದ ಲಕ್ಷ್ಮಣ ಗೋಡೆರ್ ಹಾಗೂ ಎ.ಪಿ.ಯಸೂರ್ಯವಂಶಿ ವಿಚಾರಣೆ ನಡೆಸಲು ತೆರಳಿದ್ದರು. ಈ ವೇಳೆಗೆ ಶಿವಲೀಲಾ ಕೊಲೆಯಾದ ಬಗ್ಗೆ ಊರಲ್ಲಿ ಸಂಶಯದ ವಾತಾವರಣ ನಿರ್ಮಾಣವಾಗಿತ್ತು. ಇದೇ ಜಾಡು ಹಿಡಿದು ಲಕ್ಕಪ್ಪನನ್ನು ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ, ತಾವೇ ಕೊಲೆ ಮಾಡಿರುವುದಾಗಿ ಸಹೋದರ ಹಾಗೂ ಪತಿ ಒಪ್ಪಿಕೊಳ್ಳುತ್ತಾರೆ. ವಿಠ್ಠಲ್ ಲಕ್ಷಣ ಬಂಗಿ, ಸಿದಗೊಂಡ ಕಂಬಳಿ, ಲಕ್ಕಪ್ಪ ಕಂಬಳಿ, ಬಸವರಾಜ್ ಕಬ್ಬೂರೆ, ಅಶೋಕ್ ಮೊಕಾಶಿ ಕೊಲೆ ಆರೋಪಿಗಳು ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಭೀಮಾಶಂಕರ ಗುಳೇದ ಮಾತನಾಡಿ, ಮೂರು ವರ್ಷಗಳ ಹಿಂದೆ ಮಹಿಳೆ ಕೊಲೆ ಮಾಡಿ, ಕಾಣೆಯಾಗಿದ್ದಾರೆ ಎಂದು ಸುಳ್ಳು ಹೇಳಿದ್ದ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಮೂಡಲಗಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಿರೇಬುದ್ನೂರು ಬಳಿ ಮೂಡಲಗಿ ಪೊಲೀಸರು ಹೋಗಿ ಪರಿಶೀಲನೆ ನಡೆಸಿದಾಗ ತಲೆ ಬುರುಡೆ ಮಾತ್ರ ಪತ್ತೆಯಾಗಿತ್ತು. ಮೂರು ವರ್ಷಗಳಲ್ಲಿ ಮುಂಡ ಬೇರ್ಪಟ್ಟು ಕೇವಲ ತಲೆ ಬುರುಡೆ ಮಾತ್ರ ಪತ್ತೆಯಾಗಿದ್ದು, ಎಫ್ಎಸ್ಎಲ್ಗೆ ಕಳಿಸಲಾಗಿದೆ. ಅತ್ಯಂತ ಕ್ಲಿಷ್ಟಕರ ಪ್ರಕರಣ ಭೇದಿಸಿ, ಆರೋಪಿಗಳನ್ನು ಬಂಧಿಸಲಾಗಿದೆ. ಮೂಡಲಗಿ ಪೊಲೀಸರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದು, ಸೂಕ್ತ ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ.