ಬೆಂಗಳೂರು: ಹೆಚ್ಚಿನ ಆದಾಯ ಸಂಗ್ರಹದ ನಿಟ್ಟಿನಲ್ಲಿ ನಗರ ಪ್ರದೇಶಗಳಲ್ಲಿನ ಅನಧಿಕೃತ ಆಸ್ತಿಗಳಿಗೆ ಬಿ ಖಾತೆ ನೀಡಲು ಸರ್ಕಾರ ಮುಂದಾಗಿದೆ.
ಇದರಿಂದ ಸುಮಾರು 2,000 ಕೋಟಿ ರೂ. ಆದಾಯ ಸಂಗ್ರಹವಾಗಲಿದೆ ಎಂದು ಅಂದಾಜಿಸಲಾಗಿದೆ. ಬಿಬಿಎಂಪಿ ಹೊರತುಪಡಿಸಿ ನಗರಪಾಲಿಕೆ, ನಗರಸಭೆ ಮತ್ತು ಪುರಸಭೆಯ ವ್ಯಾಪ್ತಿ ಅಕ್ರಮ ಬಡಾವಣೆಯಲ್ಲಿ ನಕ್ಷೆ ಮಂಜೂರಾತಿ ಇಲ್ಲದೆ ಕಟ್ಟಡ ನಿರ್ಮಿಸಿ ಸೌಲಭ್ಯ ಪಡೆಯುತ್ತಿರುವ ಮಾಲೀಕರಿಗೆ ನಿರ್ವಹಣಾ ಶುಲ್ಕ ವಿಧಿಸುವ ಕುರಿತಂತೆ ಗುರುವಾರ ನಡೆದ ಸಂಪುಟ ಉಪಸಮಿತಿಯಲ್ಲಿ ತೀರ್ಮಾನಿಸಲಾಯಿತು.
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ಸಭೆ ವಿಧಾನಸೌಧದಲ್ಲಿ ನಡೆಯಿತು. ಸಭೆಯಲ್ಲಿ ಸಚಿವ ಎಚ್.ಕೆ. ಪಾಟೀಲ್, ಕೃಷ್ಣಬೈರೇಗೌಡ, ರಹೀಂಖಾನ್ ಹಾಗೂ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಬಿಬಿಎಂಪಿ ಕಾಯ್ದೆ 2020ರ ಕಲಂ 144(6) ಮತ್ತು (21)ರ ಅಂಶಗಳನ್ನು ರಾಜ್ಯದ ಇತರ ಮಹಾನಗರ ಪಾಲಿಕೆಗಳಿಗೆ /ನಗರ ಸ್ಥಳೀಯ ಸಂಸ್ಥೆಗಳಿಗೆ ಸಹ ವಿಸ್ತರಣೆ ಮಾಡುವ ಸಂಬಂಧ ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ 1976 ಹಾಗೂ ಕರ್ನಾಟಕ ಪುರಸಭೆ ಕಾಯ್ದೆ 1964ರಲ್ಲಿ ಅಳವಡಿಸಿಕೊಳ್ಳುವ ಕುರಿತ ಸಾಧಕ-ಬಾಧಕ ಪರಿಶೀಲಿಸಲು ಹಾಗೂ ಸೂಕ್ತ ತೀರ್ಮಾನ ಕೈಗೊಳ್ಳುವ ಸಲುವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ಪ್ರಾಸ್ತಾವಿಕ ಮಾತನಾಡಿದ ಈಶ್ವರ ಖಂಡ್ರೆ, ಪ್ರಸ್ತುತ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ 54.91 ಲಕ್ಷಕ್ಕೂ ಹೆಚ್ಚು ಆಸ್ತಿಗಳಿದ್ದು, ಈ ಪೈಕಿ ಸುಮಾರು 20.55 ಲಕ್ಷ ಅಧಿಕೃತ ಆಸ್ತಿಗಳಾಗಿ ತೆರಿಗೆ ಪಾವತಿಸುತ್ತಿದ್ದರೆ, ಅನಧಿಕೃತವಾದ 34.35ಲಕ್ಷಕ್ಕೂ ಅಧಿಕ ಆಸ್ತಿಗಳಿಗೆ ಯಾವುದೇ ತೆರಿಗೆ ವಿಧಿಸಲಾಗುತ್ತಿಲ್ಲ.
ತೆರಿಗೆ ಸಂಗ್ರಹಣೆ: ಆದರೆ ಆ ಎಲ್ಲ ಸ್ವತ್ತಿಗೂ ನೀರು, ರಸ್ತೆ, ವಿದ್ಯುತ್, ಬೀದಿದೀಪ, ಕಸ ವಿಲೇವಾರಿ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಆಸ್ತಿ ತೆರಿಗೆ ಸಂಗ್ರಹಣೆಯೇ ಮಾರ್ಗವಾಗಿದೆ. ಇಂತಹ ಅನಧಿಕೃತ ಕಟ್ಟಡಗಳಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿ ವಹಿಯಲ್ಲಿ ಖಾತೆ ನೀಡಿ ಆಸ್ತಿ ತೆರಿಗೆ ಸಂಗ್ರಹಿಸುವ ರೀತಿಯಲ್ಲೇ ದಂಡ ಸಹಿತ ಕಟ್ಟಡ ಕಂದಾಯ ಸಂಗ್ರಹಿಸಲು ಶಿಫಾರಸು ಮಾಡುವುದು ಈ ಉಪ ಸಮಿತಿ ಜವಾಬ್ದಾರಿಯಾಗಿದೆ.
ಅಕ್ರಮ ಬಡಾವಣೆ ನಿವೇಶನ ತಡೆ: ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಕಾನೂನು ಮಾರ್ಗದಡಿ ನಿವೇಶನ ಲಭಿಸಿದರೆ, ನಕ್ಷೆ ಮಂಜೂರಾತಿ ಪ್ರಕ್ರಿಯೆ ಸರಳವಾದರೆ, ಅಕ್ರಮ ಬಡಾವಣೆ, ಕಟ್ಟಡ ನಿರ್ಮಾಣ ತಡೆಯಲು ಸಾಧ್ಯ. ಇನ್ನು ಮುಂದೆ ಅನಧಿಕೃತ ಬಡಾವಣೆ ತಲೆಎತ್ತದಂತೆ ತಡೆಯಲು ಆರ್.ಟಿ.ಸಿ.ಯ 11 ಕಾಲಂನಲ್ಲಿ ಅಕ್ರಮ ಬಡಾವಣೆ ಎಂದು ನಮೂದಿಸಿದರೆ, ಅದು ಉಪ ನೋಂದಣಾಧಿಕಾರಿಗಳಿಗೆ ಕಾವೇರಿ ತಂತ್ರಾಂಶದಲ್ಲಿ ನೇರ ಸಂಪರ್ಕಿತವಾಗುವಂತೆ ಮಾಡಿದರೆ ಇಂತಹ ಅಕ್ರಮ ಬಡಾವಣೆ ನಿವೇಶನಗಳ ಮಾರಾಟ ತಡೆಯಬಹುದು ಎಂದು ಸಲಹೆ ನೀಡಿದರು.
ಹಿರಿಯ ಸಚಿವ ಹೆಚ್.ಕೆ.ಪಾಟೀಲ್, ಇ ಖಾತಾ ಆಧಾರದ ಮೇಲೆ ಮಾತ್ರ ನೋಂದಣಿ ಆಗಬೇಕು. ತಮ್ಮ ನಿವೇಶನಕ್ಕಿಂತ ಹೆಚ್ಚಿನ ಅಳತೆಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿ ಯಾರೇ ಕಟ್ಟಡ ನಿರ್ಮಿಸಿದ್ದರೆ ಖಾತೆಯಲ್ಲಿ ಮಾಲೀಕರ ಹೆಸರು ಮತ್ತು ಸರ್ಕಾರ ಎಂದು ನಮೂದಾಗುವಂತೆ ಮಾಡಬೇಕು. ಬಡವರು, ದಲಿತರು, ದುರ್ಬಲರು ಕಟ್ಟಿರುವ ಮನೆಗಳ ವಿಚಾರದಲ್ಲಿ ತೆರಿಗೆ ವಿಧಿಸುವಾಗ ಮಾನವೀಯತೆ ತೋರಬೇಕು ಎಂಬ ತಿಳಿಸಿದರು.