ಚಿಕ್ಕಮಗಳೂರು: ಈ ಮಳೆಗಾಲ ಮುಗಿದ ತಕ್ಷಣ ಅದಕ್ಕೊಂದು ಶಾಶ್ವತ ಪರಿಹಾರ ಮಾಡ್ತೀವಿ ಅಂತ ಜನಪ್ರತಿನಿಧಿಗಳು, ಸರ್ಕಾರ ಹೇಳ್ತಾ ಬರೋಬ್ಬರಿ 20 ವರ್ಷಗಳೇ ಕಳೆದಿವೆ. ಆದರೂ ಸಮಸ್ಯೆಗೆ ಮಾತ್ರ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಮಳೆಗಾಲದಲ್ಲಿ ದಿನಕ್ಕೆ ನಾಲ್ಕೈದು ಬಾರಿ ಮುಳುಗಡೆಯಾಗೋ ಆ ಸೇತುವೆಯಿಂದ ಅಲ್ಲಿಯ ಜನ ಅಲ್ಲೇ, ಇಲ್ಲಿಯ ಜನ ಇಲ್ಲೆ. ರಾಜಕಾರಣಿಗಳು, ಸರ್ಕಾರದ ಆಶ್ವಾಸನೆಯಿಂದ ಬೆಂದು ಬೆಂಡಾಗಿರೋ ಜನಸಾಮಾನ್ಯರು ಸರ್ಕಾರದ ವಿರುದ್ಧ ಇಡಿ ಶಾಪ ಹಾಕ್ತಿದ್ದಾರೆ.
ಸೇತುವೆ ಮುಳುಗಡೆಯಾದರೆ ಯಾವ ವಾಹನವೂ ಸಂಚರಿಸುವಂತಿಲ್ಲ. ಹೊರನಾಡಿನ ಅನ್ನಪೂರ್ಣೇಶ್ವರಿ ದೇಗುಲಕ್ಕೆ ಬರುವ ಹೊರ ರಾಜ್ಯ, ಜಿಲ್ಲೆಯ ವಾಹನಗಳು ರಾತ್ರಿ ವೇಳೆ ಈ ಸೇತುವೆ ಮೇಲೆ ನೀರಲ್ಲಿ ತೊಯ್ದು ನಿಂತ ಉದಾಹರಣೆಗಳಿವೆ. ಆದರೆ ಈವರೆಗೂ ಕೂಡ ಸಂಬಂಧಪಟ್ಟೋರಿಗೆ ಬೇಸಿಗೆನೆ ಬಂದಿಲ್ಲ. ಇದೀಗ ನೀರಿನಲ್ಲಿ ತೊಯ್ದ ಈ ಸೇತುವೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಅವನತಿಯ ಅಂಚಿನಲ್ಲಿದೆ. ಒಂದು ವೇಳೆ ಕುಸಿದು ಬಿದ್ದರೆ ಆಗುವ ಅನಾಹುತ ದೊಡ್ಡ ಪ್ರಮಾಣದ್ದಾಗಿರುತ್ತೆ. ಸೇತುವೆಯನ್ನ ಎತ್ತರಿಸಿಕೊಡುವಂತೆ ಸ್ಥಳೀಯರು ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದಾರೆ. ಆದರೆ ಸ್ಥಳೀಯರ ಮನವಿಗೆ ಸರ್ಕಾರದಿಂದ ಸಿಕ್ಕ ಕೊಡುಗೆ ಶೂನ್ಯ.