ಬೆಂಗಳೂರು: ಹೃದಯದಲ್ಲಿ ರಂಧ್ರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೃದಯದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಮಂಡಿನೋವಿನಿಂದ ಬಳಲುತ್ತಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ವೈದ್ಯಕೀಯ ತಪಾಸಣೆ ಮಾಡುವಾಗ ಹೃದಯದಲ್ಲಿ ರಂಧ್ರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಡಿ ಶಸ್ತ್ರ ಚಿಕಿತ್ಸೆಗೂ ಮುನ್ನ ಹೃದಯದ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಮೊಣಕಾಲು ನೋವು ತೀವ್ರವಾಗಿದ್ದರಿಂದ ವೈದ್ಯರ ಸಲಹೆ ಮೇರೆಗೆ ಭಾನುವಾರ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿ, ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಲು ಮುಂದಾಗಿದ್ದರು. ಮಂಡಿ ಶಸ್ತ್ರಚಿಕಿತ್ಸೆ ನಡೆಸುವ ಮೊದಲು ಹೃದಯ ಪರೀಕ್ಷೆ ನಡೆಸಿದಾಗ ಹೃದಯದಲ್ಲಿ ರಂಧ್ರವಿರುವುದು ಪತ್ತೆಯಾಗಿದೆ. ಹೃದಯ ಸಮಸ್ಯೆ ಕಾಣಿಸಿಕೊಳ್ಳದೇ ಇದ್ದರೂ ಪರೀಕ್ಷೆ ವೇಳೆ ಹೃದಯದಲ್ಲಿನ ರಂಧ್ರ ಪತ್ತೆಯಾಗಿದ್ದರಿಂದ ಮೊದಲು ಹೃದಯ ಶಸ್ತ್ರ ಚಿಕಿತ್ಸೆಗೆ ವೈದ್ಯರು ನಿರ್ಧರಿಸಿದ್ದರು.
ಬೊಮ್ಮಾಯಿ ಅವರ ಕುಟುಂಬ ಸದಸ್ಯರ ಒಪ್ಪಿಗೆ ಪಡೆದು ವೈದ್ಯರು ಹೃದಯ ಚಿಕಿತ್ಸೆ ನಡೆಸಿದ್ದಾರೆ. ಹೃದಯದ ಬೈಪಾಸ್ ಸರ್ಜರಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಹೃದಯ ಚಿಕಿತ್ಸೆ ಯಶಸ್ವಿಯಾಗಿದ್ದು ಬೊಮ್ಮಾಯಿ ಅವರ ಆರೋಗ್ಯ ಸುಧಾರಿಸುತ್ತಿದೆ. ಯಾವುದೇ ತೊಂದರೆ ಇಲ್ಲ. ಹೃದಯದ ಶಸ್ತ್ರಚಿಕಿತ್ಸೆ ನಂತರ ಆರೋಗ್ಯ ಸುಧಾರಣೆಯಾದ ಬಳಿಕ ಬೊಮ್ಮಾಯಿ ಅವರಿಗೆ ಮಂಡಿ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ನಿರ್ಧರಿಸಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಆದರೆ ಆಸ್ಪತ್ರೆಯಿಂದ ಇನ್ನೂ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿಲ್ಲ.
ಆಸ್ಪತ್ರೆಗೆ ಬರದಂತೆ ಬೊಮ್ಮಾಯಿ ಮನವಿ: ನನಗೆ ಲಘು ಶಸ್ತ್ರಚಿಕಿತ್ಸೆ ಆಗಿದೆ, ಆದಷ್ಟು ಬೇಗ ಚೇತರಿಸಿಕೊಂಡು ನಿಮ್ಮ ಮುಂದೆ ಬರಲಿದ್ದೇನೆ. ಯಾರೂ ಆಸ್ಪತ್ರೆಗೆ ಬರಬಾರದು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಚಿಕಿತ್ಸೆಯ ಮಾಹಿತಿ ಹಂಚಿಕೊಂಡು ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
ಆತ್ಮೀಯರೇ, ನನಗೆ ಲಘು ಶಸ್ತ್ರ ಚಿಕಿತ್ಸೆಯಾಗಿದ್ದು, ವೈದ್ಯರ ಸಲಹೆ ಮೇರೆಗೆ ಈಗ ಸಂಪೂರ್ಣ ವಿಶ್ರಾಂತಿ ಪಡೆಯುತ್ತಿದ್ದೇನೆ. ಆದಷ್ಟು ಬೇಗ ಸಂಪೂರ್ಣ ಗುಣಮುಖನಾಗಿ ನಿಮ್ಮ ಮುಂದೆ ಬರಲು ಕಾತುರದಿಂದ ಕಾಯುತ್ತಿದ್ದೇನೆ. ಸದ್ಯ ಆಸ್ಪತ್ರೆಯಲ್ಲಿರುವ ಕಾರಣ, ನೀವೆಲ್ಲರೂ ಆಸ್ಪತ್ರೆಗೆ ನನ್ನನ್ನು ನೋಡಲು ಬಂದರೇ, ಆಸ್ಪತ್ರೆಯಲ್ಲಿರುವ ಇತರ ರೋಗಿಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ ನೀವ್ಯಾರು ಆಸ್ಪತ್ರೆಗೆ ಬರಬಾರದೆಂದು ಕಳಕಳಿಯಾಗಿ ಮನವಿ ಮಾಡುತ್ತೇನೆ. ನಿಮ್ಮ ಶುಭ ಹಾರೈಕೆಗಳು ನನ್ನನ್ನು ಮಾನಸಿಕವಾಗಿ ಮತ್ತಷ್ಟು ಗಟ್ಟಿ ಮಾಡಿದ್ದು, ಶೀಘ್ರದಲ್ಲಿಯೇ ಜನಸೇವೆಗೆ ಮರಳುತ್ತೇನೆ. ಶುಭ ಹಾರೈಸಿದ ಪ್ರತಿಯೊಬ್ಬರಿಗೂ ನನ್ನ ಹೃದಯಾಂತರಾಳದಿಂದ ಅನಂತ ಅನಂತ ಧನ್ಯವಾದಗಳು ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿ ಮನವಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿಯ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ, ಶಸ್ತ್ರಚಿಕಿತ್ಸೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ನಿಕಟಪೂರ್ವ ಮುಖ್ಯಮಂತ್ರಿಗಳು, ಆತ್ಮೀಯರೂ ಆದ ಬಸವರಾಜ ಬೊಮ್ಮಾಯಿ ಅವರು ಆದಷ್ಟು ಶೀಘ್ರದಲ್ಲಿ ಸಂಪೂರ್ಣ ಗುಣಮುಖರಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.