ಮೈಸೂರು: ಮಹಿಷಾ ದಸರಾ ಆಚರಣೆ ಹಾಗೂ ಚಾಮುಂಡಿ ಬೆಟ್ಟ ಚಲೋ ಜಾಥಾಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಚಾಮುಂಡಿ ಬೆಟ್ಟ ಹಾಗೂ ಮೈಸೂರು ನಗರದಲ್ಲಿ ಮಧ್ಯರಾತ್ರಿಯಿಂದ ನಾಳೆ ಬೆಳಗ್ಗೆ6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದ ಮಹಿಷಾ ಪ್ರತಿಮೆ ಸುತ್ತ ಹಾಗೂ ನಾಲ್ಕು ಕಡೆ ಚಾಮುಂಡಿ ಬೆಟ್ಟದ ದ್ವಾರಗಳಲ್ಲಿ ಬಿಗಿಯಾದ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಈ ನಿಷೇಧಾಜ್ಞೆ ಕೇವಲ ಮಹಿಷಾ ದಸರಾ ಹಾಗೂ ಚಾಮುಂಡಿ ಚಲೋ ಕಾರ್ಯಕ್ರಮಕ್ಕೆ ಮಾತ್ರ ಅನ್ವಯವಾಗಲಿದೆ ಎಂದು ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಮಾಹಿತಿ ನೀಡಿದ್ದಾರೆ.
ಮಹಿಷಾ ದಸರಾ ಸಮಿತಿಯಿಂದ ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಿನಾಚರಣೆ ಆಚರಣೆ ಹಾಗೂ ಮೈಸೂರು ನಗರ ಬಿಜೆಪಿ ವತಿಯಿಂದ ಚಾಮುಂಡಿ ಚಲೋ ಜಾಥದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಕಮಿಷನರ್ ಕಚೇರಿಗೆ ಅನುಮತಿಗಾಗಿ ಪತ್ರ ಸಲ್ಲಿಸಿದ್ದಾರೆ. ಆದರೆ ಈ ಕಾರ್ಯಕ್ರಮಗಳ ಆಚರಣೆಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ, ಅಕ್ಟೋಬರ್ 12 ರ ಮಧ್ಯರಾತ್ರಿಯಿಂದ ಅಕ್ಟೋಬರ್ 14ರ ಬೆಳಗ್ಗೆ 6 ಗಂಟೆಯವರೆಗೆ ಸಿಆರ್ಪಿಸಿ ಕಲಂ 144ರ ಅಡಿ ನಿಷೇಧಾಜ್ಞೆ ಹೇರಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ.
ಇದರನ್ವಯ ಕಳೆದ ಮಧ್ಯರಾತ್ರಿಯಿಂದಲೇ ಚಾಮುಂಡಿ ಬೆಟ್ಟ ಸೇರಿದಂತೆ, ಚಾಮುಂಡಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ನಾಲ್ಕು ದ್ವಾರಗಳಲ್ಲಿ ಬಿಗಿಯಾದ ಪೊಲೀಸ್ ಬಂದೋಬಸ್ತ್ ಹಾಕಲಾಗಿದ್ದು. ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೆ ನಿಷೇಧ ಹೇರಲಾಗಿದೆ. ಜೊತೆಗೆ ಮೈಸೂರು ನಗರದಲ್ಲಿ ಪ್ರತಿಭಟನೆ, ಬೈಕ್ ರ‍್ಯಾಲಿ, ಜಾಥಾ, ಪರ ವಿರೋಧ ಘೋಷಣೆಗಳು, ಸಂಭ್ರಮಾಚರಣೆ, ಫ್ಲೆಕ್ಸ್ಗಳನ್ನು ಹಾಕುವುದಕ್ಕೆ ನಿಷೇಧ ಹೇರಲಾಗಿದೆ.