ಬೆಂಗಳೂರು: ಶಾಲೆ ತೊರೆದಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕರ್ನಾಟಕವು ದೇಶದಲ್ಲೇ 7 ನೇ ಸ್ಥಾನ ಪಡೆದುಕೊಂಡಿದ್ದು, ರಾಜ್ಯಾದ್ಯಂತ ಕಳೆದ ಐದು ವರ್ಷಗಳಲ್ಲಿ 57,785 ವಿದ್ಯಾರ್ಥಿಗಳು ಶಿಕ್ಷಣ ತೊರೆದಿದ್ದಾರೆ.
ವಿದ್ಯಾರ್ಥಿಗಳು ಶಾಲೆ ತೊರೆಯುವುದನ್ನು ತಡೆಯಲು ಐದು ವರ್ಷದಲ್ಲಿ ಸರ್ಕಾರದಿಂದ ಬರೋಬ್ಬರಿ 1,099.63 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದೆ. ಆದರೂ ಮಕ್ಕಳು ಶಾಲೆ ತೊರೆಯುವುದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣವೇನು, ಸರ್ಕಾರ ಏನೆಲ್ಲಾ ಕ್ರಮವಹಿಸಲು ಮುಂದಾಗಿದೆ ಎನ್ನುವ ಕುರಿತ ಒಂದು ವರದಿ ಇಲ್ಲಿದೆ.
ಶಾಲೆ ತೊರೆದ ಮಕ್ಕಳ ಸಂಖ್ಯೆಯಲ್ಲಿ ಕರ್ನಾಟಕವು ಇಡೀ ದೇಶದಲ್ಲೇ 7ನೇ ಸ್ಥಾನದಲ್ಲಿದೆ. ಬಂಡವಾಳ ಹೂಡಿಕೆ, ಅಭಿವೃದ್ಧಿ ದರ, ತೆರಿಗೆ ಸಂಗ್ರಹದಲ್ಲಿ ಮುಂಚೂಣಿಯಲ್ಲಿರುವ ರಾಜ್ಯವು ಶಾಲೆಗಳಿಂದ ಮಕ್ಕಳ ಡ್ರಾಪ್ ವಿಚಾರದಲ್ಲಿಯೂ ಮುಂದೆ ಇರುವುದು ತಲೆತಗ್ಗಿಸುವ ಸಂಗತಿಯಾಗಿದೆ. ಕಳೆದ 5 ವರ್ಷಗಳ ಅಂಕಿ ಅಂಶಗಳನ್ನು ಗಮನಿಸುವುದಾದರೆ 2018-19ರಲ್ಲಿ 7,605, 2019-20ರಲ್ಲಿ 17,298, 2020-21ರಲ್ಲಿ 8,476, 2021-22ರಲ್ಲಿ 18,461 ಮತ್ತು 2022-23ನೇ ಸಾಲಿನಲ್ಲಿ 5,945 ವಿದ್ಯಾರ್ಥಿಗಳು ಶಾಲೆ ತೊರೆದಿದ್ದಾರೆ.
ಶಾಲೆಗಳಿಂದ ದೂರವಾಗುತ್ತಿರುವ ಮಕ್ಕಳುಸಮಗ್ರ ಶಿಕ್ಷಣ ಯೋಜನೆಯಡಿ ಶಾಲೆ ತೊರೆಯುವುದನ್ನು ತಡೆಯಲು ಕಳೆದ ಐದು ವರ್ಷಗಳಲ್ಲಿ 1,099.63 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ. 2018-19ರಲ್ಲಿ 688.99 ರೂ., 2019-20ರಲ್ಲಿ 149.29 ರೂ., 2020-21ರಲ್ಲಿ 42.33 ರೂ., 2021-22ರಲ್ಲಿ 208.08 ರೂ. ಮತ್ತು 2022-23ನೇ ಸಾಲಿನಲ್ಲಿ 10.94 ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಆದರೂ ವಿದ್ಯಾರ್ಥಿಗಳು ಶಾಲೆಯಿಂದ ದೂರವಾಗುತ್ತಿದ್ದಾರೆ.
ವಿದ್ಯಾರ್ಥಿಗಳು ಶಾಲೆ ತೊರೆಯಲು 10 ಕಾರಣಗಳನ್ನು ಸರ್ಕಾರದ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ವಲಸೆ ಜೀವನ, ಕೌಟುಂಬಿಕ ಸಮಸ್ಯೆ, ಮಕ್ಕಳ ಅನಾರೋಗ್ಯ, ಹೆಣ್ಣುಮಕ್ಕಳಿಗೆ ಸಂಬಂಧಿಸಿದ ಕಾರಣ, ಹೆಣ್ಣು ಮಗು ಪ್ರೌಢಾವಸ್ಥೆಗೆ ಬರುವುದು, ಅಲೆಮಾರಿ ಜೀವನ, ತೀವ್ರ ಅಂಗವಿಕಲತೆ, ಬುಡಕಟ್ಟು ಜನಾಂಗದ ಮಕ್ಕಳು, ಅನಾಥ ಮಗು, ಬೀದಿಮಗು ಅಥವಾ ಚಿಂದಿ ಆಯುವ ಮಗು ಎನ್ನುವುದು ಮಕ್ಕಳು ಶಾಲೆಯಿಂದ ದೂರ ಉಳಿಯಲು ಕಾರಣ ಎಂದು ತಿಳಿದುಬಂದಿದೆ.
ಸರ್ಕಾರದಿಂದ ಅನುದಾನಶಿಕ್ಷಣ ಸಚಿವರು ಹೇಳುವುದೇನು?: ”ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ ಮತ್ತು ಆರೋಗ್ಯ ಇಲಾಖೆಗಳ ಸಹಭಾಗಿತ್ವದಲ್ಲಿ ವಲಸೆ ಮಕ್ಕಳನ್ನು ಪತ್ತೆ ಹಚ್ಚಿ ಶಿಕ್ಷಣ ಮುಖ್ಯವಾಹಿನಿಗೆ ತರಲು ಶಿಕ್ಷಣ ಇಲಾಖೆ ಕಾರ್ಯತಂತ್ರ ರೂಪಿಸಿದೆ. ವಲಸೆ ಮಕ್ಕಳನ್ನು ಶಿಕ್ಷಣ ಮುಖ್ಯವಾಹಿನಿಗೆ ತರಲು ದುರ್ಬಲ ಮತ್ತು ಅವಕಾಶ ವಂಚಿತ ಮಕ್ಕಳಿಗೆ ಮತ್ತು ವಲಸಿತ ಮಕ್ಕಳಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ವಸತಿ ಶಾಲೆ, ಕಸ್ತೂರ ಬಾ ಗಾಂಧಿ ಬಾಲಿಕಾ ವಸತಿ ನಿಲಯ, ಕರ್ನಾಟಕ ಕಸ್ತೂರ ಬಾ ಗಾಂಧಿ ವಸತಿ ಶಾಲೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಗಳ ವಸತಿ ನಿಲಯಗಳಲ್ಲಿ ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದೆ” ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಮಧು ಬಂಗಾರಪ್ಪ ತಿಳಿಸಿದ್ದಾರೆ.