ಬೆಂಗಳೂರು: ನಾಗರಿಕರ ಧ್ವನಿಯೇ ನಮ್ಮ ಸರ್ಕಾರದ ಧ್ವನಿ.
ಹೀಗಾಗಿ ‘ಬ್ರ್ಯಾಂಡ್ ಬೆಂಗಳೂರು’ ಯೋಜನೆಯಲ್ಲಿ ನಗರದ ಜನರ ಅಭಿಪ್ರಾಯ ಸಂಗ್ರಹಿಸಿ, ಅವರ ನಿರೀಕ್ಷೆಗೆ ತಕ್ಕಂತೆ ನಾವು ಬೆಂಗಳೂರು ಅಭಿವೃದ್ಧಿಯ ನೀಲನಕ್ಷೆ ಸಿದ್ದಪಡಿಸಲಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ‘ಬ್ರ್ಯಾಂಡ್ ಬೆಂಗಳೂರು’ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಕುಮಾರ್, ಬೆಂಗಳೂರಿಗೆ ಅಂಟಿರುವ ಗಾರ್ಬೇಜ್ ಸಿಟಿ, ಟ್ರಾಫಿಕ್ ಸಿಟಿ ಎಂಬ ಕಳಂಕವನ್ನು ತೊಡೆದು ಹಾಕುತ್ತೇವೆ. ಪ್ರತಿ ರಸ್ತೆಯಲ್ಲಿ ಕ್ಯೂಆರ್ ಕೋಡ್ ಹಾಕಿ ಅಲ್ಲಿನ ಕಾಮಗಾರಿ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡುತ್ತೇವೆ. ಜನರಿಗೆ ಆ ರಸ್ತೆಯ ಕಾಮಗಾರಿ ಕುರಿತು ಪಾರದರ್ಶಕ ಮಾಹಿತಿ ನೀಡಲಿದ್ದೇವೆ ಎಂದು ಹೇಳಿದರು.
ಬಿಬಿಎಂಪಿ ಚುನಾವಣೆಗೆ 225 ವಾರ್ಡ್ ಮಾಡಲಾಗಿದೆ. ವಾರ್ಡ್ ಸಮಿತಿ ಇಲ್ಲದ ಕಾರಣ ಜನರು ಕೆಲವು ಸಲಹೆ ನೀಡಿದ್ದಾರೆ. ಪಾರ್ಕ್, ಆಟದ ಮೈದಾನಗಳ ಮೇಲುಸ್ತುವಾರಿಯನ್ನು ಸ್ಥಳೀಯರಿಗೆ ನೀಡಿ ಎಂದು ಹೇಳಿದ್ದಾರೆ. ಈ ಬಗ್ಗೆ ನಾನು ಎಲ್ಲ ಶಾಸಕರ ಜೊತೆ ಚರ್ಚೆ ಮಾಡುತ್ತೇನೆ. ಇದರಲ್ಲಿ ಯಾವುದೇ ಪಕ್ಷದವರಾದರೂ ಸದಸ್ಯರಿಲ್ಲದ ನಾಗರಿಕ ಸಮೂಹಕ್ಕೆ ಜವಾಬ್ದಾರಿ ವಹಿಸಲು ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದರು.
ನಾನು ಬಹಳ ಉತ್ಸುಕನಾಗಿ ಬೆಂಗಳೂರು ನಗರಾಭಿವೃದ್ಧಿಯ ಜವಾಬ್ದಾರಿಯನ್ನು ವಹಿಸಿದ್ದೇನೆ. ಈ ಹಿಂದೆ ಕೂಡ ಎಸ್ ಎಂ ಕೃಷ್ಣ ಅವರ ಕಾಲದಲ್ಲಿ ನಗರಾಭಿವದ್ಧಿ ಸಚಿವಾನಾಗಿದ್ದಾಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬಿಎಂಐಸಿಪಿ ರಸ್ತೆ ಯೋಜನೆಗೆ ಸಹಿ ಹಾಕಲಾಗಿತ್ತು. ಜೆ.ಹೆಚ್ ಪಟೇಲರ ಅವಧಿಯಲ್ಲಿ ಬೆಂಗಳೂರಿನಲ್ಲಿ ಮೋನೋ ರೈಲು ತರಲು ನಿರ್ಧರಿಸಲಾಗಿತ್ತು. ನಾನು ಹಾಗೂ ಅನಂತಕುಮಾರ್ ಚರ್ಚೆ ನಡೆಸಿ ಬೇರೆ ಬೇರೆ ಕಡೆ ಹೋಗಿ ಅಧ್ಯಯನ ಮಾಡಿ ನಂತರ ದೆಹಲಿ ಮಾದರಿಯಂತೆ ಮೆಟ್ರೋ ರೈಲು ಜಾರಿಗೆ ತಂದೆವು ಎಂದು ನೆನೆದರು.