ಚಿಕ್ಕೋಡಿ(ಬೆಳಗಾವಿ): ಶಾಲೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಮೂರು ಮಕ್ಕಳು ಕಾಣೆಯಾಗಿರುವ ಪ್ರಕರಣದಲ್ಲಿ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಮಕ್ಕಳು ಪತ್ತೆಯಾಗಿದ್ದು, ಪೋಷಕರ ಆತಂಕ ದೂರಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ನಿವಾಸಿಯ ಮೂವರು ವಿದ್ಯಾರ್ಥಿಗಳು ಶುಕ್ರವಾರ ಸಂಜೆ ಅಥಣಿ ಪಟ್ಟಣದಲ್ಲಿ ಕಾಣೆಯಾಗಿದ್ದರು.
ಶಾಲೆಗೆ ಹೋಗಿ ಬರುತ್ತೇನೆ ಎಂದು ಮಕ್ಕಳು ಮರಳಿ ಮನೆಗೆ ಬಾರದೆ ಇದ್ದಾಗ ಕುಟುಂಬಸ್ಥರು ಆತಂಕಗೊಂಡು ಅಥಣಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಕುಟುಂಬಸ್ಥರು ಶೋಧ ಕಾರ್ಯ ನಡೆಸಿದರು, ಹುಡುಕಾಟ ಸಮಯದಲ್ಲಿ ಅಥಣಿ ಅರಣ್ಯ ಇಲಾಖೆಯ ಗಾರ್ಡನ್ಲ್ಲಿ ಶಾಲೆಯ ಮಕ್ಕಳ ಎರಡು ಸೈಕಲ್ಗಳು ಪತ್ತೆಯಾಗಿದ್ದವು.
ಸತತವಾಗಿ 2ಗಂಟೆ ಹುಡುಕಾಟ ನಡೆಸಿದರು ಮಕ್ಕಳ ಸುಳಿವು ಸಿಕ್ಕಿರುವುದಿಲ್ಲ. ಅಥಣಿಯ ಪೊಲೀಸ್ ಠಾಣೆಗೆ ಪ್ರಕರಣ ದಾಖಲಿಸಲು ಪೋಷಕರು ಮುಂದಾದಾಗ ಆ ಸಮಯದಲ್ಲಿ ಕಾಣೆಯಾದ ಓರ್ವ ಬಾಲಕನಿಂದ ಪೋಷಕರ ಮೊಬೈಲ್ ನಂಬರ್ಗೆ ದೂರವಾಣಿ ಕರೆ ಬರುತ್ತದೆ. ಅಥಣಿ ಪೋಲೀಸರು ಆ ಕರೆ ಆಧರಿಸಿ ಮಹಾರಾಷ್ಟ್ರದ ರತ್ನಗಿರಿ ಪೊಲೀಸರ ಜೊತೆಗೆ ಸಂಪರ್ಕ ಸಾಧಿಸಿ ಮಕ್ಕಳನ್ನು ರಕ್ಷಣೆ ಮಾಡಿರುತ್ತಾರೆ. ಅಥಣಿ ಪೊಲೀಸರ ತಂಡ ಹಾಗೂ ಪೋಷಕರು ಜೊತೆಗೂಡಿ ಇವತ್ತು ಮುಂಜಾನೆ (ಶನಿವಾರ) 7 ಗಂಟೆಗೆ ಸುರಕ್ಷಿತವಾಗಿ ಮಕ್ಕಳನ್ನು ಮನೆಗೆ ಕರೆ ತರಲಾಗಿದೆ. ಅಥಣಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಮಕ್ಕಳ ಮಹಾರಾಷ್ಟ್ರ ಪ್ರಯಾಣ ರೋಚಕ ಕಥೆ: ಮೂವರು ಮಕ್ಕಳು ಅಥಣಿಯ ಖಾಸಗಿ ಶಾಲೆಯಲ್ಲಿ 6ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಶುಕ್ರವಾರ ಶಾಲೆಗೆ ಗೈರಾಗಿ ಅಥಣಿಯ ಅರಣ್ಯ ಇಲಾಖೆ ಗಾರ್ಡನ್ನಲ್ಲಿ ಬ್ಯಾಗ್ ಇಟ್ಟು ಅವರು ಸ್ವಯಂಭೂ ಹನುಮಾನನ ದರ್ಶನ ಪಡೆದುಕೊಂಡು, ನಂತರ ಗಾರ್ಡ್ನ್ಗೆ ಆಗಮಿಸುತ್ತಾರೆ. ಅಲ್ಲಿ ಅವರ ಶಾಲೆ ಬ್ಯಾಗ್ ಕಾಣೆಯಾದ ಹಿನ್ನೆಲೆಯಲ್ಲಿ ಮನೆಯಲ್ಲಿ ಪೋಷಕರು ಹೊಡೆಯುತ್ತಾರೆ ಮತ್ತು ಶಾಲೆಗೆ ಗೈರಾಗಿದ್ದೆವು ಎಂದು ಆತಂಕಗೊಂಡು ಅಥಣಿ ಬಸ್ ನಿಲ್ದಾಣಕ್ಕೆ ಬಂದು ಮಹಾರಾಷ್ಟ್ರದ ಮೀರಜ್ ಬಸ್ ಹಿಡಿದುಕೊಂಡು ಸಂಚಾರ ಬೆಳೆಸಿದ್ದಾರೆ.
ನಂತರ ಮಿರಜ್ ರೈಲು ನಿಲ್ದಾಣಕ್ಕೆ ಬಂದು ರೈಲು ಮುಖಾಂತರ ರತ್ನಗಿರಿಗೆ ಪ್ರಯಾಣ ಬೆಳೆಸಿರುತ್ತಾರೆ. ನಂತರ ಇದರಲ್ಲಿ ಒಬ್ಬ ಬಾಲಕ ಸಮಯ ಕಳೆಯುತ್ತಿದ್ದಂತೆ ಭಯಗೊಂಡು ಸ್ಥಳೀಯರ ಮೊಬೈಲ್ ತೆಗೆದುಕೊಂಡು ಪೋಷಕರಿಗೆ ಕರೆ ಮಾಡಿರುತ್ತಾನೆ. ಆ ದೂರವಾಣಿ ಕರೆ ಆಧಾರ ಮೇಲೆ ಅಥಣಿ ಪೊಲೀಸರು ಮಕ್ಕಳನ್ನು ಪತ್ತೆಹಚ್ಚಿ ಮಹಾರಾಷ್ಟ್ರದ ಪೊಲೀಸರಿಗೆ ಮಾಹಿತಿ ನೀಡಿ, ಅಲ್ಲಿನ ಪೊಲೀಸರು ವಿದ್ಯಾರ್ಥಿಗಳನ್ನು ಅಲ್ಲೇ ಇರಿಸಿಕೊಂಡಿದ್ದರು. ಇವತ್ತು (ಶನಿವಾರ) ಮುಂಜಾನೆ ಸುರಕ್ಷಿತವಾಗಿ ಮೂರು ಮಕ್ಕಳು ಹಿಂದಿರುಗಿಸಿದ್ದಾರೆ ಎಂದು ಮಕ್ಕಳ ಪೋಷಕರು ಈಟಿವಿ ಭಾರತ್ಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.